ಪೌತಿ ಖಾತೆ, ಪೋಡಿಗೆ ಡಿಸೆಂಬರ್ ಗಡುವು
ಬೆಂಗಳೂರು : ರಾಜ್ಯದಲ್ಲಿ ಪೌತಿ ಖಾತೆ ಅಭಿಯಾನದಡಿ ಇದುವರೆಗೆ ಕೇವಲ ಶೇ.5ರಷ್ಟು ಗುರಿ ಸಾಧನೆ ಮಾಡಲಾಗಿದೆ. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮತ್ತು ಅತಿವೃಷ್ಟಿಯಿಂದ ಪೋಡಿ ದುರಸ್ತಿ ಕಾರ್ಯ ತಡವಾಗಿದೆ, ಹೀಗಾಗಿ ಎರಡೂ ಕಾರ್ಯಗಳಿಗೆ ವೇಗ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ವಿಡಿಯೋ ಸಂವಾದ ಮೂಲಕ ನಡೆದ ತಹಶೀಲ್ದಾರ್ ಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದ ಅವರು, ಪೌತಿ ಖಾತೆ ಅಭಿಯಾನ ಆರಂಭವಾಗಿ ಎಷ್ಟು ತಿಂಗಳಾಯಿತು? 41.62 ಲಕ್ಷ ಜಮೀನು ಮೃತರ ಹೆಸರಲ್ಲಿದೆ. ಈ ಪೈಕಿ ಎರಡು ಲಕ್ಷ ಪ್ರಕರಣಗಳನ್ನು ಮಾತ್ರ ಇದುವರೆಗೆ ಮೃತರ ವಾರಸುದಾರರ ಹೆಸರಿಗೆ ಬದಲಿಸಲಾಗಿದೆ. ನಮ್ಮ ಗುರಿಯಲ್ಲಿ ಶೇ. 5 ರಷ್ಟು ಕೆಲಸ ಮಾತ್ರ ಆಗಿದೆ. ಕೂಡಲೇ ಅಭಿಯಾನಕ್ಕೆ ವೇಗ ನೀಡಿ ಪೂರ್ಣ ಗುರಿ ಸಾಧನೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದ್ದಾರೆ.