US:ವೈಟ್ ಹೌಸ್ ಭದ್ರತಾ ತಪಾಸಣಾ ಕೇಂದ್ರದ ಮೇಲೆ ಗುಂಡು: ದುಷ್ಕರ್ಮಿಯ ಹತ್ಯೆ
ವಾಷಿಂಗ್ಟನ್: ಅಮೆರಿಕದ ಶ್ವೇತಭವನದ ಹೊರಗಿನ ಸೀಕ್ರೆಟ್ ಸರ್ವಿಸ್ ಚೆಕ್‌ಪಾಯಿಂಟ್ ಮೇಲೆ ಗುಂಡು ಹಾರಿಸಿದ ನಂತರ ಬಂದೂಕುಧಾರಿಯೊಬ್ಬನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ಸೀಕ್ರೆಟ್ ಸರ್ವಿಸ್ ವಕ್ತಾರರು ಸಿಬಿಎಸ್ ನ್ಯೂಸ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಗಳ ಪ್ರಕಾರ ಶಂಕಿತ ವ್ಯಕ್ತಿ ಚೆಕ್‌ಪಾಯಿಂಟ್ ಸಮೀಪಿಸಿ, ಬ್ಯಾಗ್‌ನಿಂದ ರಿವಾಲ್ವರ್ ತೆಗೆದು ಅಲ್ಲಿ ನಿಯೋಜಿಸಲಾಗಿದ್ದ ಅಧಿಕಾರಿಗಳ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಗುಪ್ತಚರ ದಳದ ಸಿಬಂದಿ ಪ್ರತಿಯಾಗಿ ಗುಂಡು ಹಾರಿಸಿದ್ದಾರೆ. ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.
ಗುಂಡಿನ ಚಕಮಕಿಯ ಸಮಯದಲ್ಲಿ ಒಬ್ಬ ಪ್ರತ್ಯಕ್ಷದರ್ಶಿ ಕೂಡ ಗಾಯಗೊಂಡಿದ್ದು, ಆದರೆ ಆ ವ್ಯಕ್ತಿಗೆ ತಗುಲಿದ್ದು ದುಷ್ಕರ್ಮಿ ಹಾರಿಸಿದ ಗುಂಡುಗಳೇ ಅಥವಾ ಅಧಿಕಾರಿಗಳ ಗುಂಡುಗಳೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಯ ಸ್ಥಿತಿಯ ಕುರಿತು ಯಾವುದೇ ಮಾಹಿತಿ ತತ್ ಕ್ಷಣ ಲಭ್ಯವಾಗಿಲ್ಲ.ಈ ಘಟನೆಯಲ್ಲಿ ನಮ್ಮ ಸಿಬಂದಿ ಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸೀಕ್ರೆಟ್ ಸರ್ವಿಸ್ ತಿಳಿಸಿದೆ. 21 ವರ್ಷದ ಯುವಕ ತಾನೇ ಯೇಸು ಎಂದು ನಂಬಿದ್ದ! ದಾಳಿ ನಡೆಸಿರುವ ದುಷ್ಕರ್ಮಿ ನಾಸಿರ್ ಬೆಸ್ಟ್ ಎಂದು ಗುರುತಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಆತನ ನಿಖರವಾದ ಉದ್ದೇಶ ಸ್ಪಷ್ಟವಾಗಿಲ್ಲವಾದರೂ, ವರದಿಗಳು ಅವನು ಮಾನಸಿಕವಾಗಿ ಅಸ್ವಸ್ಥನಾಗಿದ್ದ ಮತ್ತು ಪ್ರವೇಶ ಚೆಕ್‌ಪಾಯಿಂಟ್‌ಗಳ ಬಳಿ ಅಡ್ಡಾಡುತ್ತಿದ್ದಕ್ಕಾಗಿ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಆಗಾಗ್ಗೆ ಅವನನ್ನು ಟೀಕಿಸುತ್ತಿದ್ದರು ಎಂದು ಹೇಳಲಾಗಿದೆ.