Technical snag: 8 ಗಂಟೆಗಳ ಹಾರಾಟದ ಬಳಿಕ ಮತ್ತೆ ದೆಹಲಿಗೆ ವಾಪಸ್ಸಾದ ಏರ್ ಇಂಡಿಯಾ ವಿಮಾನ
ನವದೆಹಲಿ: ದೆಹಲಿಯಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ತಾಂತ್ರಿಕ ದೋಷದ ಕಾರಣದಿಂದಾಗಿ ಸುಮಾರು 8 ಗಂಟೆಗಳ ಕಾಲ ಆಕಾಶದಲ್ಲೇ ಹಾರಾಟ ನಡೆಸಿ, ಬಳಿಕ ಮತ್ತೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನದಲ್ಲಿದ್ದ ಸುಮಾರು 230 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಮಾನವು ಟೇಕ್-ಆಫ್ ಆಗಿ ಮೂರು ಗಂಟೆಗಳ ನಂತರ ಚೀನಾ ವಾಯುಪ್ರದೇಶದಲ್ಲಿದ್ದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್‌ಗಳು ವಿಮಾನವನ್ನು ದೆಹಲಿಯತ್ತ ತಿರುಗಿಸಿದ್ದಾರೆ. ಒಟ್ಟಾರೆಯಾಗಿ ಎಂಟು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ಬಳಿಕ ವಿಮಾನವು ದೆಹಲಿಯಲ್ಲಿ ಯಶಸ್ವಿಯಾಗಿ ಕೆಳಗಿಳಿದಿದ್ದು ನಿಗದಿತ ಸುರಕ್ಷತಾ ನಿಯಮಾವಳಿಗಳ ಪ್ರಕಾರವೇ ವಿಮಾನವನ್ನು ದೆಹಲಿಗೆ ವಾಪಸ್ ತರಲಾಗಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ವಿಮಾನವನ್ನು ಈಗ ತಾಂತ್ರಿಕ ತಪಾಸಣೆಗೆ ಒಳಪಡಿಸಲಾಗಿದೆ," ಎಂದು ಏರ್ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದ್ದು. ಸದ್ಯ ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆಗೆ ಮುಂದಾಗಿದ್ದು, ಇದರ ಜೊತೆಗೆ ಪ್ರಯಾಣಿಕರಿಗೆ ವಸತಿ ಮತ್ತು ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ ಎಂದು ತಿಳಿದಿದೆ.