Select Location
All Locations
State
Region
City / District
ವಿಜಯ್ ಸರ್ಕಾರ ಉರುಳಿಸುವುದು ನಮ್ಮ ಉದ್ದೇಶವಲ್ಲ; ಸ್ಟಾಲಿನ್ ಹೇಳಿಕೆಗೆ ಡಿಎಂಕೆ ಸ್ಪಷ್ಟನೆ!

ವಿಜಯ್ ಸರ್ಕಾರ ಉರುಳಿಸುವುದು ನಮ್ಮ ಉದ್ದೇಶವಲ್ಲ; ಸ್ಟಾಲಿನ್ ಹೇಳಿಕೆಗೆ ಡಿಎಂಕೆ ಸ್ಪಷ್ಟನೆ!

ಚೆನ್ನೈ: ನಟ ಸಿ. ಜೋಸೆಫ್ ವಿಜಯ್ ನೇತೃತ್ವದ ನೂತನ ಟಿವಿಕೆ (TVK) ಸರ್ಕಾರದ ಆಡಳಿತಾವಧಿಯ ಕುರಿತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ (DMK) ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ನೀಡಿದ್ದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ ಬೆನ್ನಲ್ಲೇ, ಡಿಎಂಕೆ ಮಂಗಳವಾರ ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿದೆ. ಹೊಸ ಸರ್ಕಾರವನ್ನು ಉರುಳಿಸುವ ಅಥವಾ ವಿಸರ್ಜಿಸುವ ಯಾವುದೇ ಉದ್ದೇಶ ನಮ್ಮ ಪಕ್ಷಕ್ಕಿಲ್ಲ ಎಂದು ಡಿಎಂಕೆ ತಿಳಿಸಿದೆ. ಕಳೆದ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಎಂ.ಕೆ. ಸ್ಟಾಲಿನ್, "ತಮಿಳುನಾಡಿನಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಟಿವಿಕೆ ಸರ್ಕಾರವು ಮೂರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದು ಕಷ್ಟ ಎಂದು ಭವಿಷ್ಯ ನುಡಿದಿದ್ದರು. ಇದು ತಮಿಳುನಾಡು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿತ್ತು. ವಿವಾದ ತಾರಕಕ್ಕೇರುತ್ತಿದ್ದಂತೆ ಡಿಎಂಕೆ ಹಿರಿಯ ನಾಯಕ ಮತ್ತು ಮಾಜಿ ಸಚಿವ ತಂಗಂ ತೇನ್ನರಸು ಅವರು ಪಕ್ಷದ ಪರವಾಗಿ ಅಧಿಕೃತ ಪ್ರಕಟಣೆ ಹೊರಡಿಸಿ ಸ್ಟಾಲಿನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಮ್ಮ ನಾಯಕ ಎಂ.ಕೆ. ಸ್ಟಾಲಿನ್ ಅವರು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗ, ‘ನಾವು ಮುಂದಿನ 6 ತಿಂಗಳವರೆಗೆ ಸರ್ಕಾರದ ಯಾವುದೇ ನಿರ್ಧಾರಗಳನ್ನು ಟೀಕಿಸುವುದಿಲ್ಲ’ ಎಂದು ಹೇಳಿದ್ದರು. ಆದರೆ, ಸದ್ಯ ತಮಿಳುನಾಡಿನಲ್ಲಿ ಉದ್ಭವಿಸಿರುವ ಪರಿಸ್ಥಿತಿಯನ್ನು ನೋಡಿದರೆ, ಈ ಸರ್ಕಾರ ಮೂರು ತಿಂಗಳು ಪೂರೈಸುವುದೂ ಅನುಮಾನ ಎಂಬ ವಾತಾವರಣ ನಿರ್ಮಾಣವಾಗಿದೆ ಎಂದಷ್ಟೇ ಅವರು ಹೇಳಿದ್ದಾರೆ. ಸರ್ಕಾರವನ್ನು ಬೀಳಿಸುವುದು ನಮ್ಮ ನಿಲುವಲ್ಲ, ಎಂದು ಸ್ಪಷ್ಟಪಡಿಸಿದ್ದಾರೆ.


Udayavani 1 hour ago
Home Flash News