ಬೈಂದೂರು: ಶಾರದೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ
ಬೈಂದೂರು: ಇಲ್ಲಿನ ರಾಮಕ್ಷತ್ರಿಯ ಯುವಕ ಸಮಾಜ ನೇತೃತ್ವದಲ್ಲಿ ಅ.17ರಿಂದ 20ರ ತನಕ 40ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭವು ಅದ್ದೂರಿಯಾಗಿ ಜರುಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಜರುಗಿತು.
ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ಗುರುದತ್ತ ಹೆಬ್ಬಾಗಿಲುಮನೆ ತಗ್ಗರ್ಸೆ ಮತ್ತು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಶೇರುಗಾರ್ ಬಿಜೂರು ಉಪಸ್ಥಿತಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಸಮಾಜದ ಪ್ರಮುಖರಾದ ಸುಬ್ರಾಯ ಸೋಡಿತಾರ್, ಜಯಾನಂದ ಹೋಬಳಿದಾರ್, ಸದಾಶಿವ ಡಿ. ಪಡುವರಿ, ಕೃಷ್ಣಯ್ಯ ಮದ್ದೋಡಿ, ವೆಂಕಟರಮಣ ಬಿಜೂರು, ಶಿವಾನಂದ ಮದ್ದೋಡಿ, ದಿನಕರ ಹೋಬಳಿದಾರ್, ಆನಂದ ಮದ್ದೋಡಿ, ಸೀತಾರಾಮ ಎಸ್., ವಾಸುದೇವ ಕೆ. ಹಾಗೂ ಯುವಕ ಸಮಾಜದ ಗೌರವಾಧ್ಯಕ್ಷ ರಾಜಶೇಖರ್ ರೊಕ್ಕನ್, ಅಧ್ಯಕ್ಷ ರಾಜೇಶ್ ಕಲ್ಲುಕಂಟ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ದಡ್ಡು ಕಾರ್ಯದರ್ಶಿ ಶಿವಾನಂದ ದುಬಾರಿ, ಮಾತೃ ಮಂಡಳಿ ಅಧ್ಯಕ್ಷೆ ಸೀತಾ ಭಾಸ್ಕರ, ವಸಂತಿ ಮದ್ದೋಡಿ ಮುಂತಾದವರು ಉಪಸ್ಥಿತರಿದ್ದರು.
ಅ.17ರಿಂದ ಅ. 20ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಅ.17ರ ಬೆಳಿಗ್ಗೆ ಶ್ರೀ ಶಾರದಾಂಬೆ ವಿಗ್ರಹವನ್ನು ವಾದ್ಯಘೋಷದೊಂದಿಗೆ ತಂದು ಪ್ರತಿಷಾಪನೆ. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಜನಾ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಮಧ್ಯಾಹ್ನ ಭಕ್ತಿಗೀತೆ, ರಂಗೋಲಿ, ಸಂಗೀತ ಕುರ್ಚಿ, ಹೂಮಾಲೆ ಕಟ್ಟುವ ಸ್ಪರ್ಧೆಗಳು ನಡೆಯಲಿದ್ದು, ಬಳಿಕ ಭಗವದ್ಗೀತಾ ಪಠಣ ಸ್ಪರ್ಧೆ ನಡೆಯಲಿದೆ. ಸಂಜೆ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ.
ಅ.18ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಬಳಿಕ ನೃತ್ಯ ಸಿಂಚನಾ ಹಾಗೂ ನವದುರ್ಗೆ ನೃತ್ಯ ರೂಪಕ ನಡೆಯಲಿದೆ.
ಅ.19ರಂದು ಬೆಳಿಗ್ಗೆ ನವಚಂಡಿಕಾ ಯಾಗ, ಸಂಜೆ ಅಭಿನಂದನಾ ಸಮಾರಂಭ ಬಳಿಕ ರಾಮಕ್ಷತ್ರಿಯ ಭಾಂದವರಿಗಾಗಿ ರಾಜ್ಯ ಮಟ್ಟದ ಸಾಂಸ್ಕೃತಿಕ ನೃತ್ಯ ಸ್ಪರ್ಧೆ ಜರುಗಲಿದ್ದು ಅ.20ರ ಸಂಜೆ ವೈಭವದ ಪುರಮೆರವಣೆಗೆ ಜರುಗಲಿದೆ ಎಂದು ಅಧ್ಯಕ್ಷ ರಾಜೇಶ್ ಕಲ್ಲುಕಂಟ ತಿಳಿಸಿದರು.