South India's No.1 Digital Mobile Paper
LIVE
Welcome to Smacy Media

ಭಾರತ– ವೆಸ್ಟ್‌ ಇಂಡೀಸ್ ಮೂರನೇ ಟಿ20 ಪಂದ್ಯ: ಮತ್ತೊಮ್ಮೆ ರನ್‌ ಹೊಳೆಯ ನಿರೀಕ್ಷೆ

ಭಾರತ– ವೆಸ್ಟ್‌ ಇಂಡೀಸ್ ಮೂರನೇ ಟಿ20 ಪಂದ್ಯ: ಮತ್ತೊಮ್ಮೆ ರನ್‌ ಹೊಳೆಯ ನಿರೀಕ್ಷೆ

ಇಂದೋರ್: ಭಾರತ ಮತ್ತು ವೆಸ್ಟ್‌ ಇಂಡೀಸ್ ನಡುವಣ ಮೂರನೇ ಟಿ20 ಪಂದ್ಯ ಭಾನುವಾರ ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮತ್ತೊಮ್ಮೆ ರನ್ ಹೊಳೆ ಹರಿಯುವ ಸಾಧ್ಯತೆ ಹೆಚ್ಚು. ಈಗಾಗಲೇ ದಂಡನೆಗೊಳಗಾಗಿರುವ ಬೌಲರ್‌ಗಳ ಮೇಲೆ ಮತ್ತಷ್ಟು ಒತ್ತಡ ಬೀಳಲಿದೆ.

ರಾಂಚಿಯಲ್ಲಿ ಶುಕ್ರವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ 501 ರನ್‌ಗಳು ಹರಿದುಬಂದಿದ್ದವು. ಭಾರತ ನಿಗದಿಪಡಿಸಿದ 250 ರನ್‌ಗಳ ಭರ್ಜರಿ ಗುರಿಯನ್ನು ವೆಸ್ಟ್‌ ಇಂಡೀಸ್ ತಂಡ ಇನ್ನೂ 1.3 ಓವರ್‌ ಇರುವಂತೆ ಯಶಸ್ವಿಯಾಗಿ ಬೆನ್ನಟ್ಟಿತ್ತು. ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಅವರು ಹತ್ತು ದಿನಗಳ ಅಂತರದಲ್ಲಿ ಎರಡನೇ ಬಾರಿ ಬೌಲರ್‌ಗಳ ದಯನೀಯ ಪರಿಸ್ಥಿತಿಯ ಬಗ್ಗೆ ಕನಿಕರ ವ್ಯಕ್ತಪಡಿಸಿದರು.

‘ಈ ಬೌಲರ್‌ಗಳೂ ನಮ್ಮವರೇ. ಪರಿಶ್ರಮ ಪಟ್ಟು ಡ್ರೆಸಿಂಗ್‌ ರೂಮ್‌ಗೆ ಬಂದವರು. ಚೆಂಡು– ಬ್ಯಾಟಿನ ಮಧ್ಯೆ ಪೈಪೋಟಿ ಇದ್ದರೆ, ಒಳ್ಳೆಯ ಆಟ ಆಸ್ವಾದಿಸಬಹುದು’ ಎಂದು ಪಂದ್ಯದ ನಂತರ ಗಂಭೀರ್ ಹೇಳಿದ್ದರು.

ಆದರೆ ಗಂಭೀರ್ ನೇತೃತ್ವದ ಚಿಂತಕರ ಚಾವಡಿ, ತಂಡದ ಬೌಲರ್‌ಗಳು ಮತ್ತು ಎದುರಾಳಿ ಪಡೆಯ ಬೌಲರ್‌ಗಳಿಗೆ ತಕ್ಷಣಕ್ಕೆ ಪರಿಹಾರ ಸಿಗುವ ಸಾಧ್ಯತೆಯಿಲ್ಲ. ಏಕೆಂದರೆ ಇಂದೋರ್‌ನ ಕ್ರೀಡಾಂಗಣ ಸಾಂಪ್ರದಾಯಿಕವಾಗಿ ಬ್ಯಾಟರ್‌ಗಳಿಗೆ ನೆರವು ನೀಡುತ್ತಾ ಬಂದಿದೆ. ಇಲ್ಲಿನ ನಿರ್ಜೀವ ಪಿಚ್‌, ಶಾರ್ಟ್ ಬೌಂಡರಿಗಳಿಂದಾಗಿ ಬ್ಯಾಟರ್‌ಗಳೇ ಪ್ರಾಬಲ್ಯ ಸಾಧಿಸಿದ್ದಾರೆ.
ಇಂಥ ಪಂದ್ಯ‌ಗಳಲ್ಲಿ ಕ್ಯಾಚುಗಳು ಮಹತ್ವದ್ದಾಗುತ್ತವೆ. ವೆಸ್ಟ್‌ ಇಂಡೀಸ್‌ ಇನಿಂಗ್ಸ್‌ ಅರ್ಧ ಆಗಿದ್ದಾಗ ಮಯಂಕ್ ಯಾದವ್, ಶೆರ್ಫೇನ್ ರುದರ್‌ಫೋರ್ಡ್‌ (84, 37 ಎಸೆತ) ಅವರ ಕ್ಯಾಚ್ ನೆಲಕ್ಕೆ ಹಾಕಿದ್ದು ದುಬಾರಿಯಾಯಿತು. 38 ರನ್ ಗಳಿಸಿದ್ದಾಗ ಜೀವದಾನ ಪಡೆದ ಅವರು ಏಳು ಸಿಕ್ಸರ್ ಮತ್ತು ಅಷ್ಟೇ ಬೌಂಡರಿಗಳನ್ನು ಹೊಡೆದು ನಾಯಕ ಶಾಯ್ ಹೋಪ್ ಜೊತೆ ಪಂದ್ಯದ ದಿಕ್ಕನ್ನು ಬದಲಾಯಿಸಿದರು.

ಹೋಪ್‌ ಅವರ ಅಮೋಘ ಫಾರ್ಮ್‌ನಲ್ಲಿರುವುದು ಭಾರತಕ್ಕೆ ಎದುರಿಸುತ್ತಿರುವ ಇನ್ನೊಂದು ಚಿಂತೆಯಾಗಿದೆ. ವೆಸ್ಟ್‌ ಇಂಡೀಸ್ ನಾಯಕ ಸತತ ಶತಕಗಳನ್ನು ಹೊಡೆದಿದ್ದಾರೆ. ಅವರು ಕೌಶಲದ ಆಟದಿಂದ ತಂಡವು, ಭಾರತಕ್ಕೆ ಅದರ ನೆಲದಲ್ಲೇ ಸಡ್ಡುಹೊಡೆದಿದೆ.

ಬೌಲಿಂಗ್‌ ವಿಭಾಗ ಪರಿಣಾಮಕಾರಿಗೊಳಿಸಲು ಭಾರತಕ್ಕೆ ಇದು ಮತ್ತೊಂದು ಅವಕಾಶವಾಗಿದೆ. ರಾಂಚಿಯಲ್ಲಿ 5 ವಿಕೆಟ್‌ಗೆ 249 ರನ್ ಹೊಡೆದ ನಂತರ, ಮಯಂಕ್ ಯಾದವ್ ಅವರ ಆರಂಭದ ಯಶಸ್ಸಿನಿಂದ ಭಾರತ ತಂಡ ಹಿಡಿತ ಸಾಧಿಸಿತ್ತು. ಆದರೆ ಇದಾವುದರಿಂದ ವಿಚಲಿತವಾಗದ ವೆಸ್ಟ್ ಇಂಡೀಸ್, ತನ್ನ ಇದುವರೆಗಿನ ಅತ್ಯಧಿಕ ಗುರಿ ಬೆನ್ನಟ್ಟಿದ ದಾಖಲೆ ಬರೆಯಿತು. ರುದರ್‌ಫೊರ್ಡ್ ಲಯ ಕಂಡುಕೊಂಡಿದ್ದು ತಂಡದ ಉತ್ಸಾಹ ದುಪ್ಪಟ್ಟಾಗಿಸಿದೆ. ರೋಸ್ಟನ್ ಚೇಸ್ ಯಶಸ್ಸು (24ಕ್ಕೆ3) ಬೌಲಿಂಗ್ ವಿಭಾಗದ ಉತ್ಸಾಹ ಹೆಚ್ಚಿಸಿದೆ.

ನಾಯಕ ಶ್ರೇಯಸ್ ಅಯ್ಯರ್ ಒಳ್ಳೆಯ ಲಯದಲ್ಲಿದ್ದಾರೆ. ಬೌಲರ್‌ಗಳ ಮೇಲೆ ಸವಾರಿ ನಡೆಸಿದ್ದಾರೆ. ಕೆಲವು ಪಂದ್ಯಗಳಲ್ಲಿ ವಿಫಲರಾಗಿದ್ದ ಸಂಜು ಸ್ಯಾಮ್ಸನ್ 41 ಎಸೆತಗಳಲ್ಲಿ 82 ರನ್ ಬಾರಿಸಿದರು. ಹೀಗಾಗಿ ವೈಭವ್ ಸೂರ್ಯವಂಶಿ ಇನ್ನೂ ಕಾಯಬೇಕಾಗಬಹುದು. ಭಾರತ ಕೆಲವು ಪ್ರಯೋಗಗಳನ್ನು ನಡೆಸುತ್ತಿದೆ. ಎರಡನೇ ಪಂದ್ಯದಲ್ಲಿ ಅಯ್ಯರ್‌ ಅವರಿಗಿಂತ ಮೊದಲು ಶಿವಂ ದುಬೆ ಆಡಿದ್ದರು.

📍 Chennai
📰 Prajavani
🕒 20 days ago

Related News

Today's Motivation
Today's Motivation
Daily Calender
Daily Calender
Today's Motivation
Today's Motivation
⬅ Back
➕ Post Ad
To Ads ➡