ಸ್ಯಾಮ್ಸನ್-ನಮನ್ ಬ್ಯಾಟಿಂಗ್ ಅಬ್ಬರ: ಕಿವೀಸ್ ಪ್ರವಾಸದಲ್ಲಿ ಭಾರತದ ಶುಭಾರಂಭ
ಕ್ರೈಸ್ಟ್‌ಚರ್ಚ್: ಸುದೀರ್ಘ ನ್ಯೂಜಿಲ್ಯಾಂಡ್ ಪ್ರವಾಸವನ್ನು ಭಾರತ ತಂಡವು ಗೆಲುವಿನೊಂದಿಗೆ ಆರಂಭಿಸಿದೆ. ಟಿ20 ಸರಣಿಯ ಮೊದಲ ಪಂದ್ಯವನ್ನು ನಾಲ್ಕು ವಿಕೆಟ್ ಅಂತರದಿಂದ ಗೆದ್ದ ಶ್ರೇಯಸ್ ಅಯ್ಯರ್ ಪಡೆ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡವು ಫಿಲಿಪ್ಸ್ ಬ್ಯಾಟಿಂಗ್ ಸಹಾಯದಿಂದ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 225 ರನ್ ಮಾಡಿದರೆ, ಸಂಜು ಸ್ಯಾಮ್ಸನ್ ಮತ್ತು ನಮನ್ ಧೀರ್ ಬ್ಯಾಟಿಂಗ್ ಕಾರಣದಿಂದ ಭಾರತ ತಂಡವು 19.4 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಹೇಗ್ಲಿ ಓವಲ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕಿವೀಸ್ ತಂಡಕ್ಕೆ ಟಿಮ್ ಸೈಫರ್ಟ್ ಮತ್ತು ಫಿನ್ ಆಲೆನ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ 49 ರನ್ ಗಳಿಸಿದರು. ಅಲೆನ್ 45 ರನ್ ಮಾಡಿದರೆ, ಸೈಫರ್ಟ್ 24 ರನ್ ಮಾಡಿದರು. ಡ್ಯಾರೆಲ್ ಮಿಚೆಲ್ 28 ರನ್ ಮಾಡಿದರೆ, ಬೆವೊನ್ ಜೇಕೊಬ್ಸ್ 31 ರನ್ ಮಾಡಿದರು.
ಗ್ಲೆನ್ ಫಿಲಿಪ್ಸ್ ಅವರು ಒಂದೆಡೆ ಭರ್ಜರಿಯಾಗಿ ಬ್ಯಾಟ್ ಬೀಸಿದರು. 40 ಎಸೆತ ಎದುರಿಸಿದ ಫಿಲಿಪ್ಸ್ ಅಜೇಯ 82 ರನ್ ಮಾಡಿದರು. ಇದರಲ್ಲಿ ಅವರು ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್ ಗಳಿಸಿದರು.
ನಾಲ್ಕು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಭುವನೇಶ್ವರ್ ಕುಮಾರ್ ಪರಿಣಾಮ ಬೀರಲಿಲ್ಲ. ಅರ್ಶದೀಪ್, ಮಯಾಂಕ್ ಮತ್ತು ಅಕ್ಷರ್ ತಲಾ ಒಂದು ವಿಕೆಟ್ ಪಡೆದರು.
226 ರನ್ ಗುರಿ ಪಡೆದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಮೊದಲ ವಿಕೆಟ್ ಗೆ 6 ಓವರ್ ಗಳಲ್ಲಿ 93 ರನ್ ಮಾಡಿದರು. ಅಭಿಷೇಕ್ 12 ಎಸೆತಗಳಲ್ಲಿ 29 ರನ್ ಮಾಡಿದರೆ, ಸಂಜು 33 ಎಸೆತಗಳಲ್ಲಿ 67 ರನ್ ಚಚ್ಚಿದರು. 115 ರನ್ ಗೆ ಎರಡನೇ ವಿಕೆಟ್ ಕಳೆದುಕೊಂಡ ಭಾರತ 122 ರನ್ ಆಗುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ತಿಲಕ್ ಮತ್ತು ಇಶಾನ್ ವಿಫಲರಾದರು. ಆದರೆ ನಾಯಕ ಶ್ರೇಯಸ್ ಅಯ್ಯರ್ 42 ರನ್ ಮಾಡಿ ತಂಡವನ್ನು ಆಧರಿಸಿದರು. ಅಕ್ಷರ್ ಪಟೇಲ್ 24 ರನ್ ಮಾಡಿದರು.
ಕೊನೆಗೆ ಗಟ್ಟಿಯಾಗಿ ನಿಂತ ನಮನ್ ಧೀರ್ ಕೇವಲ 15 ಎಸೆತಗಳಲ್ಲಿ ಅಜೇಯ 42 ರನ್ ಗಳಿಸಿ ತಂಡಕ್ಕೆ ಜಯ ತಂದಿತ್ತರು. ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆ ತಂಡವು ಜಯ ಸಾಧಿಸಿತು.