ಚುನಾವಣೆಗೂ ಮುನ್ನ ಇರಾನ್ ಮೇಲೆ ದಾಳಿಗೆ ನೆತನ್ಯಾಹು ಒತ್ತಡ, ಸೇನಾ ಮುಖ್ಯಸ್ಥ ವಿರೋಧ
ಟೆಲ್ ಅವೀವ್: ಇಸ್ರೇಲ್ ಸಾರ್ವತ್ರಿಕ ಚುನಾವಣೆಗೆ ಮುನ್ನ ಇರಾನ್ ಮೇಲೆ ಮತ್ತೊಮ್ಮೆ ವೈಮಾನಿಕ ದಾಳಿ ನಡೆಸಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಲವು ವಾರಗಳಿಂದ ಪ್ರಯತ್ನಿಸಿದ್ದರು. ಆದರೆ, ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಐಯಲ್ ಝಮೀರ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಚುನಾವಣೆಗೆ ಮುನ್ನ ದಾಳಿ ನಡೆಸುವ ತುರ್ತು ಅಗತ್ಯವಿಲ್ಲ ಎಂಬುದು ಸೇನಾ ಮುಖ್ಯಸ್ಥರ ನಿಲುವಾಗಿತ್ತು. ಇಂತಹ ಕ್ರಮ ಪ್ರತಿದಾಳಿ ನಡೆಸಲು ಇರಾನ್‌ಗೆ ಪ್ರಚೋದನೆ ನೀಡಬಹುದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದರು. ನೇರ ದಾಳಿಯ ಬದಲಿಗೆ ಇರಾನ್ ವಿರುದ್ಧ ಮತ್ತೊಂದು ರೀತಿಯ ಕಾರ್ಯಾಚರಣೆ ನಡೆಸಲು ನೆತನ್ಯಾಹು ಇತ್ತೀಚಿನ ದಿನಗಳಲ್ಲಿ ಒತ್ತಡ ಹೇರಿದ್ದರು. ಆದರೆ, ಅದರ ಸ್ವರೂಪವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಇರಾನ್ ವಿರುದ್ಧ ತಕ್ಷಣದ ಸೇನಾ ಕಾರ್ಯಾಚರಣೆಯ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಝಮೀರ್ ಬಂದಿದ್ದರು. ಚುನಾವಣೆಗೆ ಮುನ್ನ ದಾಳಿ ನಡೆಸುವುದರಿಂದ ಉಂಟಾಗಬಹುದಾದ ರಾಜಕೀಯ ಪರಿಣಾಮಗಳು ಮತ್ತು ಸಾರ್ವಜನಿಕರಿಗೆ ಅದರ ಅನಿವಾರ್ಯತೆಯನ್ನು ವಿವರಿಸುವಲ್ಲಿನ ತೊಡಕುಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು. ಇಸ್ರೇಲ್ ವಾಯುಪಡೆಯ ಮುಖ್ಯಸ್ಥ ಮೇಜರ್ ಜನರಲ್ ಓಮರ್ ಟಿಶ್ಲರ್ ಕೂಡ ಇದೇ ಅಭಿಪ್ರಾಯ ಹೊಂದಿದ್ದರು ಎಂದು ವರದಿ ಹೇಳಿದೆ.
ಇರಾನ್ ವಿರುದ್ಧ ಸಂಘರ್ಷವನ್ನು ತೀವ್ರಗೊಳಿಸುವ ನೆತನ್ಯಾಹು ಅವರ ಪ್ರಯತ್ನದ ಹಿಂದೆ ರಾಜಕೀಯ ಉದ್ದೇಶಗಳಿವೆಯೇ ಎಂಬ ಪ್ರಶ್ನೆ ಇಸ್ರೇಲ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚುನಾವಣೆಯ ಮುನ್ನ ಯುದ್ಧ ಆರಂಭವಾದರೆ ಮತದಾನ ಪ್ರಕ್ರಿಯೆಗೆ ಅಡ್ಡಿಯಾಗುವ ಅಥವಾ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆಯೂ ಇತ್ತು ಎಂದು ವರದಿ ವಿಶ್ಲೇಷಿಸಿದೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ದೇಶವನ್ನು ಯುದ್ಧಕ್ಕೆ ತಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.