MLC ಚುನಾವಣೆ: ಯೋಗಿ ಭದ್ರಕೋಟೆಯಲ್ಲಿ ಬಿಜೆಪಿಗೆ ಜಯ, ಮೋದಿ ಕ್ಷೇತ್ರದಲ್ಲಿ ಸೋಲು
ಲಖನೌ: ಉತ್ತರ ಪ್ರದೇಶದ 11 ವಿಧಾನ ಪರಿಷತ್ (ಎಂಎಲ್‌ಸಿ) ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 6 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಸಮಾಜವಾದಿ ಪಾರ್ಟಿ (ಎಸ್‌ಪಿ) 3 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ.
ಮತ ಎಣಿಕೆ ಮುಂದುವರಿದಿರುವ 2 ಕ್ಷೇತ್ರಗಳಲ್ಲಿ ಎಸ್‌ಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ತಡರಾತ್ರಿ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಲಖನೌ, ಮೀರತ್-ಸಹಾರನ್‌ಪುರ, ಬರೇಲಿ-ಮೊರಾದಾಬಾದ್ ಮತ್ತು ಗೋರಖ್‌ಪುರ-ಫೈಜಾಬಾದ್ ಶಿಕ್ಷಕರ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದ್ದರೆ, ವಾರಣಾಸಿ ಮತ್ತು ಆಗ್ರಾ ಶಿಕ್ಷಕರ ಕ್ಷೇತ್ರಗಳಲ್ಲಿ ಎಸ್‌ಪಿ ವಿಜಯ ಪತಾಕೆ ಹಾರಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಕ್ಷೇತ್ರವಾದ ಗೋರಖ್‌ಪುರದಲ್ಲಿ ಕಮಲ ಪಡೆಯ ಅಭ್ಯರ್ಥಿ ಧ್ರುವ ತ್ರಿಪಾಠಿ ಅವರು ಪಕ್ಷೇತರ ಅಭ್ಯರ್ಥಿ ರಾಜೀವ್ ಯಾದವ್ ವಿರುದ್ಧ 307 ಮತಗಳ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದಾರೆ.