Bhopal: ರೈಲಿನ ಎಸಿ ಕೋಚ್‌ನಲ್ಲಿ ಸಾಗಿಸುತ್ತಿದ್ದ 311 ಅಪರೂಪದ ಆಮೆಗಳು ವಶಕ್ಕೆ
ಭೋಪಾಲ್: ರೈಲ್ವೇ ಸುರಕ್ಷತಾ ಪಡೆ (RPF) ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಜಂಟಿ ಕಾರ್ಯಾಚರಣೆ ನಡೆಸಿ, ಭೋಪಾಲ್ ರೈಲು ನಿಲ್ದಾಣದಲ್ಲಿ ಸುಮಾರು 311 ಅಪರೂಪದ ಆಮೆಗಳನ್ನು ರಕ್ಷಿಸಿದ್ದಾರೆ.
ಈ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಆಮೆಗಳನ್ನು ಉತ್ತರ ಪ್ರದೇಶದಿಂದ ಮಧ್ಯಪ್ರದೇಶಕ್ಕೆ ರೈಲಿನ ಎಸಿ ಕೋಚ್‌ನಲ್ಲಿ ಅತ್ಯಂತ ರಹಸ್ಯವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಭೋಪಾಲ್‌ನ ಸಂತ್ ಹಿದರಾಮ್ ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ ಎಸಿ ಕೋಚ್ ನಲ್ಲಿ ಬ್ಯಾಗ್‌ಗಳಲ್ಲಿ ತುಂಬಿಸಿ ಇಟ್ಟಿದ್ದ ಆಮೆಗಳನ್ನು ಪತ್ತೆಹಚ್ಚಿದ್ದಾರೆ. ವಶಪಡಿಸಿಕೊಂಡ ಆಮೆಗಳು 'ಇಂಡಿಯನ್ ಟೆಂಟ್ ಟರ್ಟಲ್' (Indian Tent Turtles) ವರ್ಗಕ್ಕೆ ಸೇರಿದವುಗಳಾಗಿದ್ದು, ಇವು ಅಳಿವಿನ ಅಂಚಿನಲ್ಲಿರುವ ಜೀವಿಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿ ರೈಲ್ವೆ ಕೋಚ್ ಅಟೆಂಡೆಂಟ್ ಅಜಯ್ ಸಿಂಗ್ ರಾಜ್‌ಪುತ್‌ನನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದ ಗಂಗಾ ಮತ್ತು ಗೋಮತಿ ನದಿಗಳಿಂದ ಈ ಆಮೆಗಳನ್ನು ಹಿಡಿಯಲಾಗುತ್ತಿತ್ತು. ಲಕ್ನೋ, ಕಾನ್ಪುರ, ಉನ್ನಾವೊ ಮತ್ತು ಅಮೇಠಿ ಜಿಲ್ಲೆಗಳ ಸ್ಥಳೀಯ ಬೇಟೆಗಾರರು ಇವುಗಳನ್ನು ಸಂಗ್ರಹಿಸುತ್ತಿದ್ದರು. ಬಳಿಕ ರೈಲ್ವೆ ಸಿಬ್ಬಂದಿಯ ಸಹಾಯದೊಂದಿಗೆ ಎಸಿ ಕೋಚ್‌ಗಳಲ್ಲಿ ಬಚ್ಚಿಟ್ಟು ಮಧ್ಯಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು. ಅಲ್ಲಿಂದ ಗುಜರಾತ್ ಮತ್ತು ಮಹಾರಾಷ್ಟ್ರದ ಮಾರುಕಟ್ಟೆಗಳಿಗೆ ಇವುಗಳನ್ನು ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ರೈಲ್ವೇ ಪೊಲೀಸರು ಆಮೆಗಳನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.