ಕೇರಳವನ್ನು ‘ಕೇರಳಂ’ ಮಾಡಿದಂತೆ ಆಂಧ್ರವನ್ನು ‘ತೆಲುಗು ನಾಡು’ ಎಂದು ಘೋಷಿಸಿ: ರಾವ್
ಅಮರಾವತಿ: ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಒಪ್ಪಿಗೆ ನೀಡಿದಂತೆ ಆಂಧ್ರಪ್ರದೇಶವನ್ನು ‘ತೆಲುಗು ನಾಡು’ ಎಂದು ಮರುನಾಮಕರಣ ಮಾಡಬೇಕು ಎಂದು ಖ್ಯಾತ ತೆಲುಗು ವಿದ್ವಾಂಸ ಗರಿಕಾಪತಿ ನರಸಿಂಹ ರಾವ್ ಒತ್ತಾಯಿಸಿದ್ದಾರೆ. ಅಮಲಪುರಂನಲ್ಲಿ ನಡೆಯುತ್ತಿರುವ ವಿಶ್ವ ತೆಲುಗು ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ತಮಿಳುನಾಡು, ಕೇರಳಂ ಮುಂತಾದ ಹೆಸರುಗಳಲ್ಲಿ ಪ್ರತಿಫಲಿಸುವ ಗುರುತು ಮತ್ತು ಸಾಂಸ್ಕೃತಿಕ ಹೆಮ್ಮೆಯಿಂದ ಪ್ರೇರಿತರಾಗಿ ಆಂಧ್ರಪ್ರದೇಶವನ್ನು ‘ತೆಲುಗು ನಾಡು’ ಎಂದು ಮರುನಾಮಕರಣ ಮಾಡಬೇಕೆಂದು ಕರೆ ನೀಡಿದ್ದಾರೆ. ಈ ಮೂಲಕ ತೆಲುಗು ಭಾಷೆಯ ಶ್ರೀಮಂತ ಪರಂಪರೆಯನ್ನು ಎತ್ತಿ ಹಿಡಿಯಬೇಕು’ ಅವರು ಆಗ್ರಹಿಸಿದ್ದಾರೆ.
‘ಆಂಧ್ರಪ್ರದೇಶ ಎಂಬುದು ತೆಲುಗು ಹೆಸರಲ್ಲ. ಇದು ಹಿಂದಿ ಬೆಂಬಲಿತ ಮಧ್ಯಪ್ರದೇಶ ಮತ್ತು ಅರುಣಾಚಲ ಪ್ರದೇಶದಂತಹ ಉತ್ತರ ಭಾರತದ ರಾಜ್ಯಗಳಿಗೆ ಹೋಲುವಂತಿದೆ. ನಮ್ಮ ರಾಜ್ಯ (ಆಂಧ್ರಪ್ರದೇಶ) ಮತ್ತಷ್ಟು ಸಾಂಸ್ಕೃತಿಕ ಮಹತ್ವ ಹೊಂದಬೇಕಾದರೆ ತಮಿಳುನಾಡಿನಂತೆಯೇ ‘ತೆಲುಗು ನಾಡು’ ಎಂದು ಮರುನಾಮಕರಣ ಮಾಡುವುದು ಅತ್ಯಗತ್ಯ’ ಎಂದು ಅವರು ಹೇಳಿದ್ದಾರೆ.
ಹಿರಿಯ ನಟ, ರಾಜಕಾರಣಿ ಎನ್.ಟಿ. ರಾಮರಾವ್ ಅವರು ಆಂಧ್ರಪ್ರದೇಶವನ್ನು ‘ತೆಲುಗು ನಾಡು’ ಎಂದು ಘೋಷಿಸುವಂತೆ ಒತ್ತಾಯಿಸಿ ಚಳವಳಿಯನ್ನು ನಡೆಸಿದ್ದರು. ತೆಲುಗು ನಾಡು ಎಂಬುದಕ್ಕೆ ಸರಿಯಾದ ತೆಲುಗು ಉಚ್ಚಾರಣೆ ಇದೆ ಮತ್ತು ಇದು ಈ ರಾಜ್ಯಕ್ಕೆ ಸೂಕ್ತ ಹೆಸರು ಎಂದು ನರಸಿಂಹ ರಾವ್ ಅವರು ಅಭಿಪ್ರಾಯಪಟ್ಟಿದ್ದಾರೆ.