ಇರಾನ್ ಸರ್ವೋಚ್ಚ ನಾಯಕರಾಗಿ ಮೊಜ್ತಬಾ: ನಿರ್ಮೂಲನೆ ಖಚಿತ ಎಂದ ಇಸ್ರೇಲ್!
ಜೆರುಸಲೆಮ್: ಇರಾನ್‌ನ ಧಾರ್ಮಿಕ ಪ್ರಮುಖರ ಸಭೆಯು ಅಯತೊಲ್ಲಾ ಅಲಿ ಖಮೇನಿಯ ಪುತ್ರ ಮೊಜ್ತಬಾ ಖಮೇನಿ ಅವರನ್ನು ಹೊಸ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ವರದಿಯಾಗುತ್ತಿದ್ದಂತೆ ಇಸ್ರೇಲಿ ರಕ್ಷಣಾ ಸಚಿವ ಬೆದರಿಕೆ ಹಾಕಿದ್ದು, ನಾಯಕ ಯಾರೇ ಆಗಲಿ... ಅವರನ್ನು ನಿರ್ಮೂಲನೆ ಮಾಡಲಾಗುತ್ತದೆ' ಎಂದಿದ್ದಾರೆ. ರಕ್ಷಣ ಸಚಿವ ಇಸ್ರೇಲ್ ಕಾಟ್ಜ್ ಬುಧವಾರ (ಮಾ4) "ಇಸ್ರೇಲ್ ಅನ್ನು ನಾಶಮಾಡುವ, ಅಮೆರಿಕ ಮತ್ತು ಮುಕ್ತ ಜಗತ್ತನ್ನು ಬೆದರಿಸುವ, ಇರಾನಿನ ಜನರನ್ನು ದಮನಿಸುವ ಯೋಜನೆಯನ್ನು ಮುಂದುವರಿಸಲು ಮತ್ತು ಮುನ್ನಡೆಸಲು ಇರಾನಿನ ಭಯೋತ್ಪಾದಕ ಆಡಳಿತದಿಂದ ನೇಮಿಸಲ್ಪಟ್ಟ ಪ್ರತಿಯೊಬ್ಬ ನಾಯಕನೂ ನಿರ್ಮೂಲನೆಯಾಗುತ್ತಾನೆ" ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ. ಹೊಸ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ಇರಾನ್‌ನ ತಜ್ಞರ ಸಭೆಗೆ ಸಂಬಂಧಿಸಿದ ಕಟ್ಟಡವನ್ನು ಇಸ್ರೇಲ್ ಮಂಗಳವಾರ (ಮಾ 3) ಗುರಿಯಾಗಿಸಿಕೊಂಡಿತ್ತು ಎಂದು ವರದಿಯಾಗಿದೆ.