ಒಳಮೀಸಲಾತಿ ಅನ್ಯಾಯದ ವಿರುದ್ಧ ಹೋರಾಟ: ಸಿದ್ದರಾಮೇಶ್ವರ ಸ್ವಾಮೀಜಿ ಎಚ್ಚರಿಕೆ
ಬೆಂಗಳೂರು: ಒಳಮೀಸಲಾತಿಯಿಂದ ಭೋವಿ, ಬಂಜಾರ (ಲಂಬಾಣಿ), ಕೊರಮ, ಕೊರಚ, ಸಮಗಾರ, ಚರ್ಮಕಾರ ಮತ್ತು ಅಲೆಮಾರಿ ಸಮುದಾಯಗಳಿಗೆ ಆಗಲಿರುವ ಅನ್ಯಾಯವನ್ನು ಸರಿಪಡಿಸದೇ ಇದ್ದರೆ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗವುದು ಎಂದು ಚಿತ್ರದುರ್ಗದ ಭೋವಿ ಗುರು ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು. ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟವು ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
‘ಒಳಮೀಸಲಾತಿಯಿಂದ ಈ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ಅಧ್ಯಯನ ನಡೆಸಲು ಒಂದು ಸಮಿತಿ ರಚಿಸಿ, ವರದಿಯನ್ನು ಸಿದ್ಧಪಡಿಸಬೇಕು. ಅದರ ಆಧಾರದಲ್ಲಿ ವಾಸ್ತವ ಸ್ಥಿತಿಯನ್ನು ರಾಜ್ಯ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕು. ಈ ಕ್ರಿಯೆಯಲ್ಲಿ ಎಲ್ಲ ಸಮುದಾಯಗಳೂ ಒಟ್ಟಾಗಬೇಕು’ ಎಂದು ಕರೆ ನೀಡಿದರು.
ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ, ‘ವಿವಿಧ ಹಂತಗಳಲ್ಲಿ ಮೀಸಲಾತಿಯನ್ನೇ ನೀಡಲು ಸಾಧ್ಯವಾಗಿಲ್ಲ. ಆ ಅನ್ಯಾಯವನ್ನು ಮೊದಲು ಸರಿಪಡಿಸಬೇಕು. ಒಳಮೀಸಲಾತಿಯಲ್ಲಿನ ಅನ್ಯಾಯವನ್ನೂ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು. ಪರಿಶಿಷ್ಟ ಜಾತಿಗಳಿಗೆ ಶೇ 17ರಷ್ಟು ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ 7 ರಷ್ಟು ಮೀಸಲಾತಿ ಘೋಷಣೆಯನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಮನವಿ ಮಾಡಬೇಕು ಎಂದು ಒತ್ತಾಯಿಸಬೇಕು ಎಂಬ ನಿರ್ಣಯವನ್ನು ಸಮಾವೇಶದಲ್ಲಿ ತೆಗೆದುಕೊಳ್ಳಲಾಯಿತು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನಂತನಾಯ್ಕ, ಮಾಜಿ ಶಾಸಕರಾದ ಬಿ.ಟಿ.ಲಲಿತಾನಾಯಕ್, ಎಂ.ವಿ.ನಾಗ ರಾಜ್, ಜಲಜಾನಾಯಕ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಕೊರಮ ಕೊರಚ ರಾಜ್ಯ ಘಟಕ ಮಹಿಳಾ ಅಧ್ಯಕ್ಷೆ ಚಂದ್ರಿಕಾ, ಛಲವಾದಿ ಸಮಾಜದ ಮುಖಂಡ ರಾಜಗೋಪಾಲ್, ಭೋವಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚೌಡಯ್ಯ ಅವರು ಸಮಾವೇಶದಲ್ಲಿ ಭಾಗಿಯಾಗಿದ್ದರು.
ಒಳಮೀಸಲಾತಿ ರಹಿತ ಹಳೆ ಮೀಸಲಾತಿಗೆ ‘ಬಲಗೈ’ ಆಗ್ರಹ
‘ಒಳಮೀಸಲಾತಿ ಹಂಚಿಕೆ ಸಂಬಂಧಿಸಿದಂತೆ ಗೊಂದಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವವರೆಗೆ ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆ ಆಗುವವರೆಗೆ ಒಳ ಮೀಸಲಾತಿರಹಿತವಾಗಿ ಹಳೆ ಮೀಸಲಾತಿಯನ್ನು (ಶೇ 15) ಜಾರಿಗೊಳಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಮನವಿ ಸಲ್ಲಿಸಿದೆ.
‘ಒಟ್ಟು ಮೀಸಲಾತಿಯನ್ನು ಶೇ 56ಕ್ಕೆ ಹೆಚ್ಚಿಸಿರುವುದಕ್ಕೆ ತಡೆಯಾಜ್ಞೆ ನೀಡಿರುವ ಹೈಕೋರ್ಟ್ ಶೇ 50ರ ಮೀಸಲಾತಿಯಲ್ಲಿ ನೇಮಕಾತಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ. ಒಳ ಮೀಸಲಾತಿ ಹಂಚಿಕೆ ವಿಷಯವೂ ಹೈಕೋರ್ಟ್‌ನಲ್ಲಿದೆ. ಹೀಗಾಗಿ ಒಳ ಮಿಸಲಾತಿರಹಿತವಾಗಿ ಹಳೆ ಮೀಸಲಾತಿಯಡಿ ನೇಮಕಾತಿ ನಡೆಸಬೇಕು’ ಎಂದು ಮನವಿಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಜ್ಞಾನಪ್ರಕಾಶ ಸ್ವಾಮೀಜಿ ಮತ್ತು ಸಂಚಾಲಕ ಸಿದ್ದಯ್ಯ ಒತ್ತಾಯಿಸಿದ್ದಾರೆ.
‘ಹೊಸ ಜಾತಿ ಪ್ರಮಾಣಪತ್ರದ ಜೊತೆ ಹಳೆಯ ಜಾತಿ ಪ್ರಮಾಣಪತ್ರವನ್ನು ಪರಿಗಣಿಸುವಂತೆ ಆದೇಶ ಹೊರಡಿಸಬೇಕು ವಿವಿಧ ಇಲಾಖೆಗಳು ನೇಮಕಾತಿಗೆ ಈಗಾಗಲೇ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಿ ಮರು ಅಧಿಸೂಚನೆ ಹೊರಡಿಸಲು ಸೂಕ್ತ ಆದೇಶ ಹೊರಡಿಸಬೇಕು ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳು ಬಲಗೈ ಗುಂಪಿನಲ್ಲಿ ಉದ್ಯೋಗ ಶಿಕ್ಷಣ ಮತ್ತು ಇತರ ಸೌಲಭ್ಯ ಪಡೆಯಲು ಆದೇಶ ಹೊರಡಿಸಬೇಕು. ಪರಿಶಿಷ್ಟ ಜಾತಿಯ ಸಮೀಕ್ಷೆ ನಡೆಸಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗ ಸಲ್ಲಿಸಿರುವ ವರದಿಯು ಅವೈಜ್ಞಾನಿಕ ಹಾಗೂ ಪಕ್ಷಪಾತದಿಂದ ಕೂಡಿರುವುದರಿಂದ ಅದನ್ನು ತಿರಸ್ಕರಿಸಬೇಕು’ ಎಂದೂ ಆಗ್ರಹಿಸಿದ್ದಾರೆ.