ಸೋಷಿಯಲ್ ಮೀಡಿಯಾ ಬ್ಯಾನ್ ಬೆನ್ನಲ್ಲೇ ಸಚಿವ ಲಾಡ್ ಸ್ಫೋಟಕ ಹೇಳಿಕೆ, ನಮ್ಮ ಸ್ಕ್ರೀನ್ ಟೈಂ ಕೂಡ ಏಳೆಂಟು ಗಂಟೆ ಆಗಿದೆ!
ರಾಜ್ಯದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ಮತ್ತು ಮೊಬೈಲ್ ಬ್ಯಾನ್ ಮಾಡಿದೆ. ಈ ವಿಚಾರವನ್ನು ಸ್ವಾಗತಿಸಿರುವ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಒಳ್ಳೆಯ ನಿರ್ಧಾರ ಎಂದು ಹೇಳಿದ್ದಾರೆ. ಬೆಂಗಳೂರಿನ ಕೆಂಗಲ್ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಆರೋಗ್ಯ ಮತ್ತು ಮಾನಸಿಕ ಬೆಳವಣಿಗೆಗೆ ಈ ಕ್ರಮ ಸಹಾಯಕವಾಗುತ್ತದೆ ಎಂದರು.
ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ವ್ಯಸನವು ಸಮಾಜದಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ . “ಇಂದು ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಸಹ ದಿನಕ್ಕೆ ಏಳು-ಎಂಟು ಗಂಟೆಗಳಷ್ಟು ಸ್ಕ್ರೀನ್ ಟೈಮ್ ಬಳಸುತ್ತಿದ್ದಾರೆ. ಮಕ್ಕಳು ಅಂತಾ ಅಲ್ಲ ನಮ್ಮ ಸ್ಕ್ರೀನ್ ಟೈಂ ಕೂಡ ಏಳೆಂಟು ಗಂಟೆ ಆಗಿದೆ. ಇದು ಒಳ್ಳೆಯ ಪ್ರವೃತ್ತಿಯಲ್ಲ. ಆದ್ದರಿಂದ ಮೊಬೈಲ್ ಬಳಕೆಗೆ ಕಡ್ಡಾಯವಾಗಿ ನಿಯಮಿತ ಮಿತಿಯನ್ನು ಇರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಮಕ್ಕಳಿಗೆ ಮಾತ್ರವಲ್ಲ, ಎಲ್ಲರೂ ತಮ್ಮ ಮೊಬೈಲ್ ಬಳಕೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯ ಎಂದರು.
ಚುನಾವಣೆ ಗೆಲ್ಲಲು ಬಿಜೆಪಿ ಇಂತಹ ಯೋಜನೆಗಳನ್ನು ಘೋಷಿಸುತ್ತದೆ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಗ್ಯಾರಂಟಿ ಯೋಜನೆಗಳು ರಾಜ್ಯಕ್ಕೆ ಹೊರೆಯಾಗಿವೆ ಎಂಬ ಮಾತು ಸರಿಯಲ್ಲ. ಅಭಿವೃದ್ಧಿಯೊಂದಿಗೇ ಈ ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ ಎಂದು ಸ್ಪಷ್ಟಪಡಿಸಿದರು. ಅವರು ಉದಾಹರಣೆಯಾಗಿ ಬಿಹಾರ ಚುನಾವಣೆಯನ್ನು ಉಲ್ಲೇಖಿಸಿ, ಬಿಹಾರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯವರೇ ಹಲವು ಗ್ಯಾರಂಟಿ ರೀತಿಯ ಭರವಸೆಗಳನ್ನು ನೀಡಿದ್ದಾರೆ. ಚುನಾವಣೆ ಗೆಲ್ಲಲು ಅವರು ಸಹ ಇಂತಹ ಯೋಜನೆಗಳನ್ನು ಘೋಷಿಸುತ್ತಾರೆ ಎಂದು ಹೇಳಿದರು.