ಐಬಿಎಂ ಉದ್ಯೋಗ ತಿರಸ್ಕರಿಸಿ ಭಾರತೀಯ ಸೇನೆ ಸೇರಿದ ಬೆಂಗಳೂರು ಎಂಜಿನಿಯರ್, ವಿಶ್ವ ಗೆದ್ದ ಮೇಜರ್ ಸ್ವಾತಿ
2016ರಲ್ಲಿ ಬೆಂಗಳೂರಿನ ಸಾಮಾನ್ಯ ಎಂಜಿನಿಯರಿಂಗ್ ಪದವೀಧರೆಯಾಗಿ ಜೀವನ ಆರಂಭಿಸಿದ್ದ ಸ್ವಾತಿ ಶಾಂತಾ ಕುಮಾರ್ ಅವರಿಗೆ ಬಹುರಾಷ್ಟ್ರೀಯ ಸಂಸ್ಥೆ ಐಬಿಎಂನಲ್ಲಿ ಆಕರ್ಷಕ ಉದ್ಯೋಗಾವಕಾಶ ದೊರಕಿತ್ತು. ಆದರೆ ಸುಖಕರ ಕಾರ್ಪೊರೇಟ್ ಜೀವನವನ್ನು ಆಯ್ಕೆ ಮಾಡುವ ಬದಲು ಅವರು ದೇಶಸೇವೆಯ ಮಾರ್ಗವನ್ನು ಆರಿಸಿಕೊಂಡರು. ಇಂದು ಅವರು ಭಾರತೀಯ ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡ ಶಾಂತಿರಕ್ಷಕಿಯಾಗಿ ಹೊರಹೊಮ್ಮಿದ್ದಾರೆ. ದಕ್ಷಿಣ ಸೂಡಾನ್‌ನಲ್ಲಿ ಶಾಂತಿ ಸ್ಥಾಪನೆಗಾಗಿ ಮಾಡಿದ ಸೇವೆಯನ್ನು ಪರಿಗಣಿಸಿ ಅವರಿಗೆ 2025ನೇ ಸಾಲಿನ ಐಕ್ಯರಾಷ್ಟ್ರಗಳ ಮಹಾಸಚಿವರ ಪ್ರಶಸ್ತಿ ಲಭಿಸಿದೆ.
ಶಿಕ್ಷಣ, ಕ್ರೀಡೆ ಮತ್ತು ಮೌಲ್ಯಗಳಿಂದ ಬೆಳೆದ ಬಾಲ್ಯ
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸ್ವಾತಿಯ ತಂದೆ ಐಟಿಸಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ತಾಯಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಬೆಂಗಳೂರಿನ ಸೆಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದ ಅವರು ಬಾಲ್ಯದಿಂದಲೇ ಓದು ಮತ್ತು ಕ್ರೀಡೆ ಎರಡರಲ್ಲಿಯೂ ಸಮಾನ ಆಸಕ್ತಿ ತೋರಿಸುತ್ತಿದ್ದರು.
ಕ್ರೈಸ್ಟ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅವರು ಕ್ರೀಡಾಕ್ಷೇತ್ರದಲ್ಲಿ ಚುರುಕಾಗಿ ಪಾಲ್ಗೊಂಡು ಗುರುತಿಸಿಕೊಂಡಿದ್ದರು. ಜೊತೆಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದರು. ಮನೆಮಂದಿಯ ಜೊತೆ ಗಣೇಶೋತ್ಸವದ ವೇಳೆ ಅಡುಗೆ ಸಿದ್ಧಪಡಿಸುವುದರಲ್ಲಿ ಆಸಕ್ತಿ ತೋರಿಸುತ್ತಿದ್ದ ದಿನಗಳನ್ನು ಅವರು ಇಂದಿಗೂ ಸ್ಮರಿಸುತ್ತಾರೆ.
ನಂತರ ಅವರು ಬೆಂಗಳೂರಿನ ನ್ಯೂ ಹೋರೈಜನ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದರು. ಪದವಿ ಪೂರ್ಣಗೊಳಿಸಿದ ಬಳಿಕ 2016ರಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕ ಐಬಿಎಂ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಪಡೆದುಕೊಂಡರು. ಆ ಕಾಲದಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ದೊಡ್ಡ ಕಂಪನಿಯಲ್ಲಿ ಕೆಲಸ ಸಿಗುವುದು ಯಾವ ಕುಟುಂಬಕ್ಕೂ ಹೆಮ್ಮೆಯ ಸಂಗತಿಯಾಗಿತ್ತು.
ಜೀವನ ಬದಲಿಸಿದ ಮಹತ್ವದ ನಿರ್ಧಾರ
ಐಬಿಎಂ ಉದ್ಯೋಗಕ್ಕೆ ಸೇರುವ ಸಿದ್ಧತೆಯಲ್ಲಿದ್ದ ಸಮಯದಲ್ಲೇ ಸ್ನೇಹಿತರೊಂದಿಗೆ ಸರ್ವೀಸ್ ಸೆಲೆಕ್ಷನ್ ಬೋರ್ಡ್ (SSB) ಸಂದರ್ಶನಕ್ಕೆ ಹೋಗುವ ಅವಕಾಶ ಸ್ವಾತಿಗೆ ದೊರಕಿತು. ಆ ಸಂದರ್ಶನದಲ್ಲಿ ಅವರು ಯಶಸ್ವಿಯಾಗಿ ಉತ್ತೀರ್ಣರಾದರು. ಹೀಗಾಗಿ ಅವರ ಮುಂದೆ ಎರಡು ಪ್ರಮುಖ ಆಯ್ಕೆಗಳು ನಿಂತವು — ಒಂದು ಕಾರ್ಪೊರೇಟ್ ಕ್ಷೇತ್ರದಲ್ಲಿ ಉತ್ತಮ ವೇತನದ ಉದ್ಯೋಗ, ಮತ್ತೊಂದು ಭಾರತೀಯ ಸೇನೆಯಲ್ಲಿ ದೇಶಸೇವೆ.
ಈ ಸಂದರ್ಭದಲ್ಲಿ ತಂದೆ ಮತ್ತು ತಾತ ಅವರ ಸಲಹೆಯಂತೆ ಸ್ವಾತಿ ಭಾರತೀಯ ಸೇನೆಯನ್ನು ಆಯ್ಕೆ ಮಾಡಿಕೊಂಡರು.