‘ಕಮ್ ಅರ್ಲಿ-ಗೋ ಅರ್ಲಿ’ ಮಹಿಳಾ ಸರ್ಕಾರಿ ನೌಕರರಿಗಾಗಿ ಹೊಸ ಯೋಜನೆ ಜಾರಿಗೊಳಿಸಿದ ಸರ್ಕಾರ
ಮಹಾರಾಷ್ಟ್ರ ಸರ್ಕಾರವು ಮಹಿಳಾ ಸರ್ಕಾರಿ ನೌಕರರಿಗಾಗಿ 'ಕಮ್ ಅರ್ಲಿ-ಗೋ ಅರ್ಲಿ' ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ, ಮುಂಬೈ ಮಹಾನಗರ ಪ್ರದೇಶದ ಮಹಿಳಾ ಉದ್ಯೋಗಿಗಳು 30 ನಿಮಿಷ ಮುಂಚಿತವಾಗಿ ಕಚೇರಿಗೆ ಬಂದು, ಅಷ್ಟೇ ಬೇಗ ಮನೆಗೆ ಮರಳಬಹುದು. ಇದು ಅವರ ಪ್ರಯಾಣದ ಒತ್ತಡವನ್ನು ಕಡಿಮೆ ಮಾಡಿ, ಕೆಲಸ ಮತ್ತು ಕುಟುಂಬದ ನಡುವೆ ಉತ್ತಮ ಸಮತೋಲನವನ್ನು ಸಾಧಿಸಲು ಸಹಕರಿಸುತ್ತದೆ. ಮಹಿಳಾ ಸುರಕ್ಷತೆ ಮತ್ತು ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ.
ಮುಂಬೈ, ಮಾರ್ಚ್ 11: ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಮಹಾರಾಷ್ಟ್ರ(Maharashtra) ಸರ್ಕಾರ ಮಹಿಳೆಯರಿಗಾಗಿ ಹೊಸ ಯೋಜನೆಯೊಂದನ್ನು ಜಾರಿಗೊಳಿಸಿದೆ. ಅದಕ್ಕೆ ಕಮ್ ಅರ್ಲಿ ಗೋ ಅರ್ಲಿ ಎಂದು ನಾಮಕರಣ ಮಾಡಿದೆ. ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಮಹಿಳಾ ಸಬಲೀಕರಣದ ಕುರಿತು ಮಹತ್ವದ ಚರ್ಚೆ ನಡೆಯಿತು. ಈ ಚರ್ಚೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್, ಮುಂಬೈ ಮಹಾನಗರ ಪ್ರದೇಶದಲ್ಲಿ (MMR) ಕೆಲಸ ಮಾಡುತ್ತಿರುವ ಮಹಿಳಾ ಸರ್ಕಾರಿ ಉದ್ಯೋಗಿಗಳಿಗಾಗಿ ಕಮ್ ಅರ್ಲಿ, ಗೋ ಅರ್ಲಿ ಯೋಜನೆಯನ್ನು ಘೋಷಿಸಿದ್ದಾರೆ.
ಮುಂಬೈನ ಸ್ಥಳೀಯ ರೈಲುಗಳು ಮತ್ತು ರಸ್ತೆಗಳಲ್ಲಿ ಜನದಟ್ಟಣೆಯ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಂಡಿದೆ.ಕಮ್ ಅರ್ಲಿ-ಗೋ ಅರ್ಲಿ ಉಪಕ್ರಮದಡಿಯಲ್ಲಿ, ಮಹಿಳಾ ಉದ್ಯೋಗಿಗಳು ಬೆಳಗ್ಗೆ 9.15 ರಿಂದ 9.45 ರ ನಡುವೆ ಕಚೇರಿಗೆ ಬೇಗನೆ ತಲುಪಲು ಮತ್ತು ಸಂಜೆ ಮನೆಗೆ ಮುಂಚಿತವಾಗಿಯೇ ಹಿಂದಿರುಗಲು ಸಾಧ್ಯವಾಗುತ್ತದೆ. ಅವರಿಗೆ ದಿನಕ್ಕೆ ಸುಮಾರು 30 ನಿಮಿಷಗಳ ವಿಶೇಷ ರಿಯಾಯಿತಿ ನೀಡಲಾಗುವುದು.
ಇದು ಅವರ ಪ್ರಯಾಣದ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಕೆಲಸ ಮತ್ತು ಕುಟುಂಬದ ನಡುವೆ ಉತ್ತಮ ಸಮತೋಲನವನ್ನು ಸಾಧಿಸಲು ಅವರಿಗೆ ಅನುವು ಮಾಡಿಕೊಡುತ್ತದೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಸದನಕ್ಕೆ ಮಾಹಿತಿ ನೀಡಿದರು. ಜುಲೈ 2015 ರಿಂದ ಫೆಬ್ರವರಿ 2026 ರವರೆಗೆ ನಡೆಸಲಾದ ಆಪರೇಷನ್ ಮುಸ್ಕಾನ್‌ನ 14 ಹಂತಗಳಲ್ಲಿ, 42,594 ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಕಂಡುಬಂದಿದೆ.