ಕೊಲ್ಲಿ ಯುದ್ಧದಿಂದಾಗಿ ಮೊಟ್ಟೆ ರಫ್ತು ಸ್ಥಗಿತ: ಗಡಿ ಭಾಗದ ವಹಿವಾಟಿಗೆ ಹೊಡೆತ
ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಅರಬ್ ರಾಷ್ಟ್ರಗಳಿಗೆ ಇಲ್ಲಿಂದ ಸಾಗಣೆಯಾಗುತ್ತಿದ್ದ ಕೋಳಿಮೊಟ್ಟೆ ರಫ್ತು ವಹಿವಾಟು ಸ್ಥಗಿತಗೊಂಡಿದೆ. ಇದರಿಂದ ಮೊಟ್ಟೆ ಬೆಲೆಯೂ ಕುಸಿದಿದ್ದು, ಕುಕ್ಕುಟೋದ್ಯಮಕ್ಕೆ ತೊಂದರೆ ಉಂಟಾಗಿದೆ. ಆಂಧ್ರಪ್ರದೇಶದ ಜೊತೆ ಗಡಿ ಹಂಚಿಕೊಂಡಿರುವ ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಕೋಳಿ ಫಾರಂಗಳಿವೆ. ಜಿಲ್ಲೆಯ ಒಟ್ಟಾರೆ 40 ಲಕ್ಷ ಕೋಳಿಗಳನ್ನು ಸಾಕಲಾಗುತ್ತಿದೆ. ಇದರಲ್ಲಿ32 ಲಕ್ಷ ಕೋಳಿಗಳ ಸಾಕಣೆ ಪ್ರಕ್ರಿಯೆ ಈ ಎರಡು ತಾಲ್ಲೂಕು ಗಳಲ್ಲೇ ನಡೆಯುತ್ತಿದೆ. ಜಿಲ್ಲೆಯಿಂದ ರಾಜ್ಯ, ಹೊರರಾಜ್ಯಗಳಿಗೆ ಮಾತ್ರವಲ್ಲದೇ ಹೊರ ದೇಶಗಳಿಗೂ ಮೊಟ್ಟೆ ರಫ್ತಾಗುತ್ತದೆ. ಪ್ರತಿದಿನ ಅಂದಾಜು 1 ಕೋಟಿಯಷ್ಟು ಮೊಟ್ಟೆ ಕಳುಹಿಸಲಾಗುತ್ತದೆ. ಕೋಳಿ ಸಾಕಣೆ, ವಿದೇಶಿ ರಫ್ತಿಗೆ ಹೆಸರುವಾಸಿಯಾ ಗಿರುವ ತಮಿಳುನಾಡಿನ ನಾಮಕ್ಕಲ್ ಮೂಲಕ ಮೊಟ್ಟೆ ರಪ್ತು ಮಾಡಲಾಗುತ್ತದೆ.
ಯುದ್ಧ ನಡೆಯುತ್ತಿರುವ ಕಾರಣ ನಾಮಕಲ್‌ನಿಂದ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ಮೊಟ್ಟೆಗಳು ಮಾರಾಟವಾಗದೇ ಹಾಳಾಗುತ್ತಿವೆ.
‘ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ನಿಗದಿ ಮಾಡಿರುವ ದರದ ಅನುಸಾರ ತಿಂಗಳ ಹಿಂದೆ ಪ್ರತಿ ಸಗಟು ಕೋಳಿ ಮೊಟ್ಟೆ ದರ ₹ 5.50– ₹ 5.60 ಇತ್ತು. ಆದರೆ ಈಗ ₹ 3.80ರಿಂದ ₹ 3.90ಕ್ಕೆ ಕುಸಿದಿದೆ. ಇದರಿಂದ ಮೊಟ್ಟೆ ವಹಿವಾಟಿನ ಮೇಲೆ ಆತಂಕದ ಕಾರ್ಮೋಡ ಕವಿದಿದೆ’ ಎಂದು ರಾಜ್ಯ ಕೋಳಿ ಸಾಕಣೆದಾರರ ಮಂಡಳಿ ನಿರ್ದೇಶಕ ಕೆ.ಆರ್. ಕೇಶವರೆಡ್ಡಿ ಹೇಳಿದರು.
ರಫ್ತು ಪ್ರಕ್ರಿಯೆ ಸ್ಥಿತಗೊಂಡಿದ್ದರಿಂದ ಉತ್ಪಾದನೆಗೆ ಅನುಗುಣವಾಗಿ ಬೇಡಿಕೆ ಇಲ್ಲದ್ದರಿಂದ ಸ್ಥಳೀಯ ಮಾರಕಟ್ಟೆಯಲ್ಲಿ ದರ ಕುಸಿಸಿದೆ. ದಾಸ್ತಾನನ್ನು ವಾರಕ್ಕಿಂತ ಹೆಚ್ಚು ಅವಧಿಗೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅನಿವಾರ್ಯವಾಗಿ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾಗಿದೆ ಎಂದು ವರ್ತಕರು ತಿಳಿಸಿದರು.