ಇಂಡಿಯನ್ ವೆಲ್ಸ್ ಟೆನಿಸ್: ಅಲ್ಕರಾಜ್ ‘ಓಟ’ಕ್ಕೆ ಮೆಡ್ವೆಡೇವ್ ತಡೆ
ಇಂಡಿಯನ್ ವೆಲ್ಸ್ (ಅಮೆರಿಕ): ರಷ್ಯಾದ ಡೇನಿಲ್ ಮೆಡ್ವೆಡೇವ್ ಅವರು ವಿಶ್ವದ ಅಗ್ರಮಾನ್ಯ ಆಟಗಾರ ಕಾರ್ಲೋಸ್ ಅಲ್ಕರಾಜ್ ಅವರ ಗೆಲುವಿನ ಓಟಕ್ಕೆ ಶನಿವಾರ ತಡೆಯೊಡ್ಡಿದರು. ಅವರು ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 6–3, 7–6 (7–3)ರಿಂದ ನೇರ ಸೆಟ್‌ಗಳಲ್ಲಿ ಸ್ಪೇನ್‌ನ ತಾರೆಗೆ ಆಘಾತ ನೀಡಿದರು. 30 ವರ್ಷ ವಯಸ್ಸಿನ ಅನುಭವಿ ಆಟಗಾರ ಮೆಡ್ವೆಡೇವ್ ಅವರು ಪ್ರಶಸ್ತಿ ಸುತ್ತಿನಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ, ಯಾನಿಕ್ ಸಿನ್ನರ್ ಜೊತೆಗೆ ಸೆಣಸಲಿದ್ದಾರೆ. ನಾಲ್ಕು ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತ ಸಿನ್ನರ್ ಅವರು ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ 6–2, 6–4ರಿಂದ ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ವಿರುದ್ಧ ಸುಲಭವಾಗಿ ಗೆದ್ದರು.
22 ವರ್ಷ ವಯಸ್ಸಿನ ಅಲ್ಕರಾಜ್ ಅವರು ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಎಟಿಪಿ ಫೈನಲ್ಸ್ ಟೂರ್ನಿಯ ಫೈನಲ್‌ನಲ್ಲಿ ಸಿನ್ನರ್ ವಿರುದ್ಧ ಸೋಲನುಭವಿಸಿದ್ದರು. ಆ ನಂತರ ಸತತ 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು.
ಮೆಡ್ವೆಡೇವ್ ಅವರು ಈ ಟೂರ್ನಿ ಯಲ್ಲಿ 2023 ಹಾಗೂ 2024ರಲ್ಲಿ ನಾಲ್ಕರ ಘಟ್ಟದಲ್ಲಿ ಅಲ್ಕರಾಜ್ ವಿರುದ್ಧವೇ ಸೋಲನುಭವಿಸಿದ್ದರು. ಈ ಬಾರಿ ಮುಯ್ಯಿ ತೀರಿಸಿಕೊಂಡರು. ಸಮಯಪ್ರಜ್ಞೆ ಮೆರೆದ ಮೆಡ್ವೆಡೇವ್: ಮರುಭೂಮಿಯ ತಟದಲ್ಲಿ ನಡೆದ ಪಂದ್ಯದಲ್ಲಿ ಮೆಡ್ವೆಡೇವ್ ಸಮಯಪ್ರಜ್ಞೆ ಮೆರೆದರು. ಅಮೋಘ ಸರ್ವ್‌ಗಳನ್ನು ಮಾಡಿದ ಅವರು ನಾಲ್ಕು ಏಸ್‌ಗಳನ್ನೂ ಹಾಕಿದರು.
ಬೇಸ್‌ಲೈನ್‌ನಲ್ಲೇ ಆಡುವ ಮೂಲಕ ಎದುರಾಳಿ ಆಟಗಾರ ದಣಿಯುವಂತೆ ಮಾಡಿದರು. ಜೊತೆಯಲ್ಲೇ, ಆಕ್ರಮಣಕಾರಿ ಹೊಡೆತಗಳೊಂದಿಗೆ ಪಾಯಿಂಟ್ಸ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. 1 ಗಂಟೆ 37 ನಿಮಿಷಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
‘ಅಲ್ಕರಾಜ್ ಅವರಂತಹ ಬಲಿಷ್ಠ ಆಟಗಾರರನ್ನು ಸೋಲಿಸಿದ್ದಕ್ಕೆ ಬಹಳ ಸಂತೋಷವಾಗುತ್ತಿದೆ’ ಎಂದು ಮೆಡ್ವೆಡೇವ್ ಅವರು ಪಂದ್ಯದ ನಂತರ ಪ್ರತಿಕ್ರಿಯಿಸಿದರು.
‘ಮೆಡ್ವೆಡೇವ್ ವಿರುದ್ಧದ ಪಂದ್ಯದಲ್ಲಿ ದೀರ್ಘ ರ್‍ಯಾಲಿಗಳು ಸಾಮಾನ್ಯ. ಅಲ್ಲದೆ, ಪ್ರತಿ ಹೊಡೆತಗಳನ್ನೂ ಬಲವಾಗಿಯೇ ನಾವು ಹೊಡೆಯಬೇಕು. ಹಾಗಾಗಿ, ಪಂದ್ಯ ಸಾಗಿದಂತೆ ಸಾಮರ್ಥ್ಯ ಕುಂದುತ್ತಾ ಹೋಗುತ್ತದೆ. ತಾಪಮಾನವೂ ಹೆಚ್ಚಿದ್ದರಿಂದ ಸಮಸ್ಯೆಯಾಯಿತು’ ಎಂದು ಅಲ್ಕರಾಜ್ ಹೇಳಿದರು.