UPSC CMS 2026: UPSC ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆಯ ಅಧಿಸೂಚನೆ ಬಿಡುಗಡೆ; 1,358 ಹುದ್ದೆಗಳಿಗೆ ನೇಮಕಾತಿ
ಕೇಂದ್ರ ಲೋಕಸೇವಾ ಆಯೋಗವು (UPSC) 1,358 ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ನಡೆಯುವ ಪರೀಕ್ಷೆಯ ಕುರಿತು ಅಧಿಸೂಚನೆ ಪ್ರಕಟಿಸಿದೆ. ಇದಕ್ಕೆ ಎಂಬಿಬಿಎಸ್ ಪದವೀಧರರು ಮಾರ್ಚ್ 31 ರೊಳಗೆ ಅರ್ಜಿ ಸಲ್ಲಿಸಬಹುದು. ಕೇಂದ್ರ ಆರೋಗ್ಯ ಸೇವೆ, ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಆಗಸ್ಟ್ 2ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಅರ್ಹತಾ ಮಾನದಂಡಗಳು, ವಯೋಮಿತಿ ಸಡಿಲಿಕೆ ಮತ್ತು ವೇತನ ಶ್ರೇಣಿಯ ಸಂಪೂರ್ಣ ಮಾಹಿತಿ ಲಭ್ಯ.
ಕೇಂದ್ರ ಲೋಕಸೇವಾ ಆಯೋಗವು (UPSC) ದೇಶಾದ್ಯಂತ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ‘ಸಂಯೋಜಿತ ವೈದ್ಯಕೀಯ ಸೇವೆಗಳ ಪರೀಕ್ಷೆ 2026’ (Combined Medical Services Examination) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 1,358 ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಎಂಬಿಬಿಎಸ್ ಪದವೀಧರರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಈ ನೇಮಕಾತಿಯಡಿ ಕೇಂದ್ರ ಆರೋಗ್ಯ ಸೇವೆಯಲ್ಲಿ 864 ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿ ಹುದ್ದೆಗಳು, ರೈಲ್ವೆ ಇಲಾಖೆಯಲ್ಲಿ 450 ಸಹಾಯಕ ವಿಭಾಗೀಯ ವೈದ್ಯಕೀಯ ಅಧಿಕಾರಿ ಹುದ್ದೆಗಳು ಹಾಗೂ ನವದೆಹಲಿ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ತಲಾ 14 ಮತ್ತು 30 ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಎಂಬಿಬಿಎಸ್ ಪೂರ್ಣಗೊಳಿಸಿರಬೇಕು. ಪ್ರಸ್ತುತ ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿರುವವರು ಅಥವಾ ಇಂಟರ್ನ್‌ಶಿಪ್‌ನಲ್ಲಿರುವವರು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೂ, ನೇಮಕಾತಿಯ ಅಂತಿಮ ಹಂತದ ವೇಳೆಗೆ ಇಂಟರ್ನ್‌ಶಿಪ್ ಪೂರ್ಣಗೊಳಿಸಿರುವುದು ಕಡ್ಡಾಯವಾಗಿದೆ.
ವಯೋಮಿತಿಯ ವಿಷಯಕ್ಕೆ ಬಂದರೆ, ಆಗಸ್ಟ್ 1 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 32 ವರ್ಷ ಮೀರಿರಬಾರದು (ಅಂದರೆ ಆಗಸ್ಟ್ 2, 1994ಕ್ಕಿಂತ ಮೊದಲು ಜನಿಸಿರಬಾರದು). ಆದರೆ, ಕೇಂದ್ರ ಆರೋಗ್ಯ ಸೇವೆಯ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 35 ವರ್ಷಗಳವರೆಗೆ ಇರುತ್ತದೆ. ನಿಯಮಾನುಸಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 56,100 ರಿಂದ ರೂ. 1,77,500 ವರೆಗಿನ ಆಕರ್ಷಕ ವೇತನ ಹಾಗೂ ಇತರ ಭತ್ಯೆಗಳು ದೊರೆಯಲಿವೆ.