ಶಬರಿಮಲೆ ವಿವಾದ: ಸಿಎಂ ಪಿಣರಾಯಿ ವಿಜಯನ್ ನಿಲುವು ಸ್ಪಷ್ಟಪಡಿಸಲಿ: ಕೆ.ಸಿ. ವೇಣುಗೋಪಾಲ್
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ 'ಶಬರಿಮಲೆಗೆ ಮಹಿಳೆಯರ ಪ್ರವೇಶ'ದ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಚಾರದಲ್ಲಿ ರಾಜ್ಯದ ಎಡರಂಗ ಸರ್ಕಾರ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಂಗಳವಾರ ಸವಾಲು ಹಾಕಿದ್ದಾರೆ.
ನಟನಿಗೆ ಕ್ಷಮೆ, ಭಕ್ತರಿಗೇಕಿಲ್ಲ?
ಇತ್ತೀಚೆಗೆ ವಯನಾಡ್ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ವಿವಾದದಲ್ಲಿ ನಟ ಮಮ್ಮುಟ್ಟಿ ಅವರಿಗೆ ಮುಖ್ಯಮಂತ್ರಿಗಳು ಬಹಿರಂಗವಾಗಿ ಕ್ಷಮೆಯಾಚಿಸಿರುವುದನ್ನು ವೇಣುಗೋಪಾಲ್ ಪ್ರಸ್ತಾಪಿಸಿದ್ದಾರೆ. "
ಒಬ್ಬ ನಟನ ಮನಸ್ಸಿಗೆ ನೋವಾದಾಗ ಕ್ಷಮೆ ಕೇಳುವ ಮುಖ್ಯಮಂತ್ರಿಗಳು, ಶಬರಿಮಲೆಯ ಸಂಪ್ರದಾಯಕ್ಕೆ ಧಕ್ಕೆ ತಂದಾಗ ಮತ್ತು ಲಕ್ಷಾಂತರ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದಾಗ ಏಕೆ ಕ್ಷಮೆಯಾಚಿಸಲಿಲ್ಲ?" ಎಂದು ಅವರು ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಶಬರಿಮಲೆ ವಿಚಾರವಾಗಿ ಕೇರಳ ಸರ್ಕಾರ ಇಂದಿಗೂ ಸ್ಪಷ್ಟ ನಿಲುವು ತಳೆಯದೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಮಹಿಳೆಯರ ಪ್ರವೇಶದ ಪರವೋ ಅಥವಾ ವಿರೋಧವೋ ಎಂಬ 'ಹೌದು ಅಥವಾ ಅಲ್ಲ' ಎಂಬ ನೇರ ಉತ್ತರವನ್ನು ಸಿಎಂ ನೀಡಲಿ ಎಂದರು. ಶಬರಿಮಲೆ ಪ್ರತಿಭಟನೆಯ ವೇಳೆ ಭಕ್ತರ ಮೇಲೆ ದಾಖಲಾದ ಪ್ರಕರಣಗಳನ್ನು ಸರ್ಕಾರ ಈವರೆಗೂ ಹಿಂಪಡೆದಿಲ್ಲ. ಸಂಕಷ್ಟ ಅನುಭವಿಸಿದ ಭಕ್ತರಿಗೆ ಯಾವುದೇ ಪರಿಹಾರವನ್ನೂ ನೀಡಿಲ್ಲ ಎಂದು ಆರೋಪಿಸಿದ್ದಾರೆ.
2007 ಮತ್ತು 2016ರಲ್ಲಿ ಎಲ್‌ಡಿಎಫ್ ಸರ್ಕಾರ ಸಲ್ಲಿಸಿದ ಅಫಿಡವಿಟ್‌ಗಳು ಮಹಿಳೆಯರ ಪ್ರವೇಶಕ್ಕೆ ಪೂರಕವಾಗಿದ್ದವು. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಧಾರ್ಮಿಕ ವಿದ್ವಾಂಸರ ಸಲಹೆ ಪಡೆಯಬೇಕು ಎಂದು ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಿಲುವು ಸ್ಪಷ್ಟ
ಶಬರಿಮಲೆ ದೇವಸ್ಥಾನದ ಸಂಪ್ರದಾಯಗಳನ್ನು ನಾವು ಗೌರವಿಸುತ್ತೇವೆ. ಋತುಮತಿಯಾಗುವ ವಯಸ್ಸಿನ ಮಹಿಳೆಯರ ಪ್ರವೇಶವನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ. ದೇವಸ್ಥಾನದ ಆಚರಣೆಗಳನ್ನು ಮಹಿಳಾ ಸ್ವಾತಂತ್ರ್ಯದ ಜೊತೆ ತಳುಕು ಹಾಕುವುದು ಸರಿಯಲ್ಲ ಎಂದು ಪುನರುಚ್ಚರಿಸಿದ್ದಾರೆ.