ಇರಾನ್ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ಮೆರೆದ ಭಾರತ
Iran-Israel War: ಇರಾನ್-ಇಸ್ರೇಲ್ ನಡುವಿನ ಯುದ್ಧದಲ್ಲಿ ಅಮೆರಿಕ ಇಸ್ರೇಲ್ ಪರವಾಗಿ ನಿಂತು ತಾನೂ ಇರಾನ್ ಮೇಲೆ ದಾಳಿ ನಡೆಸಿತ್ತು. ಹೀಗಾಗಿ, ಅಕ್ಕಪಕ್ಕದ ಈ ಎರಡು ದೇಶಗಳ ನಡುವಿನ ಯುದ್ಧದಲ್ಲಿ ಅಮೆರಿಕ ಕೂಡ ಮುಖ್ಯ ಭಾಗ ಪಡೆದಿದೆ. ಈ ಯುದ್ಧದಲ್ಲಿ ಭಾರತ ಯಾವ ದೇಶದ ಪರವಾಗಿದೆ ಎಂದು ಘೋಷಿಸದಿದ್ದರೂ ಮೊದಲಿನಿಂದಲೂ ಇಸ್ರೇಲ್ ಜೊತೆ ಭಾರತ ಸರ್ಕಾರ ಕೊಂಚ ಹೆಚ್ಚು ಆತ್ಮೀಯತೆ ಹೊಂದಿದೆ. ಇದೀಗ ಭಾರತ ಯುದ್ಧದಿಂದ ವಿನಾಶದಂಚಿಗೆ ತಲುಪಿರುವ ಇರಾನ್ ದೇಶಕ್ಕೆ ವೈದ್ಯಕೀಯ ಕಿಟ್ಗಳನ್ನು ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದೆ.
ನವದೆಹಲಿ, ಮಾರ್ಚ್ 18: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ಇನ್ನೂ ನಿಂತಿಲ್ಲ. ಅತ್ತ ಇರಾನ್ ಕೂಡ ದಾಳಿ ನಡೆಸುವುದನ್ನು ನಿಲ್ಲಿಸಿಲ್ಲ. ಈ ಯುದ್ಧದಲ್ಲಿ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳಿಗೆ ಹಾನಿಯಾಗಿದ್ದು ಬಿಟ್ಟರೆ ಅಮೆರಿಕ ದೇಶದ ಮೇಲೆ ಯಾವುದೇ ದಾಳಿ ನಡೆದಿಲ್ಲ. ಆದರೆ, ಇಸ್ರೇಲ್ ಮತ್ತು ಇರಾನ್ ಅಕ್ಷರಶಃ ಸ್ಮಶಾನದಂತಾಗಿದೆ. ತನ್ನ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿತ್ತು. ಇದು ಜಾಗತಿಕವಾಗಿ ತೈಲ ಟ್ಯಾಂಕರ್ಗಳು ಹಾದುಹೋಗುವ ಪ್ರಮುಖ ಜಲಮಾರ್ಗವಾಗಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಇರಾನ್ ವಿರುದ್ಧ ಬೇರೆ ದೇಶಗಳು ಯುದ್ಧನೌಕೆಗಳನ್ನು ಕಳುಹಿಸಿ ಎಚ್ಚರಿಕೆ ನೀಡಬೇಕೆಂದು ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಘೋಷಿಸಿದ್ದರು. ಇರಾನ್ (Iran War) ಮೇಲೆ ಮತ್ತೆ ದಾಳಿ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಇದೆಲ್ಲದರ ನಡುವೆ ಭಾರತ ಇರಾನ್ ದೇಶಕ್ಕೆ ವೈದ್ಯಕೀಯ ನೆರವು ನೀಡಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಪ್ರಧಾನಿ ಮೋದಿ ಬಹಳ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಶಾಂತಿ ಮಾತುಕತೆಯ ಮೂಲಕ ಯುದ್ಧಕ್ಕೆ ಅಂತ್ಯ ಹಾಡಲು ಮೋದಿ ಇಸ್ರೇಲ್ಗೆ ಮನವಿ ಮಾಡಿದ್ದರು. ಈ ಯುದ್ಧ ಆರಂಭವಾದಾಗಿನಿಂದ ಹಲವು ಬಾರಿ ಇಸ್ರೇಲ್ ಜೊತೆ ಪ್ರಧಾನಿ ಮೋದಿ ಮಾತುಕತೆ ಕೂಡ ನಡೆಸಿದ್ದರು. ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯ ಹತ್ಯೆಯ ಬಗ್ಗೆ ಮೌನ ತಳೆದಿದ್ದ ಭಾರತ ಕೊನೆಗೆ ಖಮೇನಿಯ ಸಂತಾಪ ಸಭೆಯಲ್ಲಿ ಭಾಗವಹಿಸಿತ್ತು. ಇದಾದ ನಂತರ ಇರಾನ್ ಜೊತೆ ಮಾತುಕತೆ ನಡೆಸಿ ಭಾರತದ ತೈಲ ಟ್ಯಾಂಕರ್ಗಳನ್ನು ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಟ ಮಾಡಲು ಅನುಮತಿ ನೀಡಲು ಮವಿ ಮಾಡಲಾಗಿತ್ತು. ಅದಕ್ಕೆ ಒಪ್ಪಿದ್ದ ಇರಾನ್ ಭಾರತದ ಹಡಗುಗಳ ಸಂಚಾರಕ್ಕೆ ಅವಕಾಶ ನೀಡಿತ್ತು. ಇದೀಗ ಭಾರತ ಇರಾನ್ಗೆ ವೈದ್ಯಕೀಯ ನೆರವು ನೀಡಿದ್ದು, ಭಾರತೀಯರಿಗೆ ಹಾಗೂ ಭಾರತ ಸರ್ಕಾರಕ್ಕೆ ಇರಾನ್ ವಿಶೇಷವಾಗಿ ಧನ್ಯವಾದ ತಿಳಿಸಿದೆ.