ದಾವಣಗೆರೆ ಬೈ ಎಲೆಕ್ಷನ್: ಬಿಎಸ್ವೈ ಬಣಕ್ಕೆ ತೀವ್ರ ಮುಖಭಂಗ, ಮೇಲುಗೈ ಸಾಧಿಸಿದ ಮಾಜಿ ಎಂಪಿ
ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ (By Elections) ಯುಗಾದಿ ಹಬ್ಬದಂದೇ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅದರಲ್ಲೂ ಮುಖ್ಯವಾಗಿ ದಾವಣಗೆರೆ ದಕ್ಷಿಣಕ್ಕೆ ಹೈಕಮಾಂಡ್ ಹೊಸ ಮುಖಕ್ಕೆ ಮಣೆ ಹಾಕಿದೆ. ಈ ಮೂಲಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಣ ತೀವ್ರ ಮುಖಭಂಗವಾಗಿದೆ, ಇನ್ನು ಬಿಎಸ್ವೈ ಕುಟುಂಬದ ವಿರುದ್ಧವೇ ಸಿಡಿದೆದ್ದಿರುವ ಮಾಜಿ ಸಂಸದ ಮೇಲುಗೈ ಸಾಧಿಸಿದ್ದಾರೆ. ದಾವಣಗೆರೆ, (ಮಾರ್ಚ್ 19): ಕರ್ನಾಟಕದ ಎರಡು ವಿಧಾನಸಭಾ ಉಪಚುನಾವಣೆಗೆ (Davanagere By Election ) ಬಿಜೆಪಿಯ ಕೇಂದ್ರೀಯ ಆಯ್ಕೆ ಸಮಿತಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಯುಗಾದಿಯ ದಿನದಂದು, ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ದಾವಣಗೆರೆಯಲ್ಲಿ ಅಚ್ಚರಿಯ ಅಭ್ಯರ್ಥಿಯ ಘೋಷಣೆ ಮಾಡಲಾಗಿದೆ. ದಾವಣಗೆರೆ ದಕ್ಷಿಣದಿಂದ ಶ್ರೀನಿವಾಸ ಟಿ ದಾಸಕರಿಯಪ್ಪ (Srinivas Dasakariyappa) ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಮೂಲಕ ದಾವಣಗೆರೆ ರೆಬೆಲ್ ಬಣದ ಅಭ್ಯರ್ಥಿಗೆ ಮಣೆ ಹಾಕಿದ್ದು, ರಾಜ್ಯ ಬಿಜೆಪಿ ಘಟಕಕ್ಕೆ ಕೇಂದ್ರದ ನಾಯಕರು ಅಚ್ಚರಿಯನ್ನು ಮೂಡಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ವಿರೋಧಿ ಬಣದ ನಾಯಕನಿಗೆ ಟಿಕೆಟ್ ನೀಡಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನು ತಮ್ಮದೇ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಬಿಎಸ್ವೈ ಬಣದ ನಾಯಕ ಎಂಪಿ ರೇಣುಕಾಚಾರ್ಯಗೆ ಮುಖಂಭಂಗವಾಗಿದೆ. ಬಿಜೆಪಿ ಬಿಗ್ ಸರ್ಪ್ರೈಸ್
ಬಾಗಲಕೋಟೆಯಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಬಿಜೆಪಿಯಲ್ಲಿ ಅಷ್ಟೊಂದು ಗೊಂದಲವಿರಲಿಲ್ಲ. ಲಿಂಗಾಯತ ಸಮುದಾಯದ ಚರಂತಿಮಠ ಅವರಿಗೆ ಟಿಕೆಟ್ ಬಹುತೇಕ ಕನ್ಫರ್ಮ್ ಆಗಿತ್ತು. ಆದರೆ, ದಾವಣಗೆರೆಗೆ ಬಿಜೆಪಿಯ ಎರಡು ಬಣಗಳ ಪೈಪೋಟಿ ಜೋರಾಗಿತ್ತು ಮತ್ತು ಐವರು ಹೆಸರು ಕೇಳಿ ಬರುತ್ತಿತ್ತು.ಬಿಜಿ ಅಜಯ್ ಕುಮಾರ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸ ಕರಿಯಪ್ಪ, ದೇವರಮನೆ ಶಿವಕುಮಾರ್ ಮತ್ತು ಯಶ್ವಂತ್ ರಾವ್ ಜಾಧವ್ ಹೆಸರು ಕೇಳಿ ಬರುತ್ತಿತ್ತು. ಈ ಪೈಕಿ, ಯುವ ನಾಯಕ ಅಜಯ್ ಕುಮಾರ್ ಅವರಿಗೆ ಬಹುತೇಕ ಟಿಕೆಟ್ ಕನ್ಫರ್ಮ್ ಎಂದು ಹೇಳಲಾಗುತ್ತಿತ್ತು.
ಆದ್ರೆ, ಕೊನೆ ಕ್ಷಣದಲ್ಲಿ ಹೈಕಮಾಂಡ್, ಈ ಕ್ಷೇತ್ರದಲ್ಲಿ ಪ್ರಬಲವಾಗಿರುವ ಲಿಂಗಾಯತ ಅಥವಾ ಮರಾಠ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಪದ್ಧತಿಯನ್ನು ಬದಿಗೊತ್ತಿ, ಇದೇ ಮೊದಲ ಬಾರಿಗೆ ಪರಿಶಿಷ್ಟ ಪಂಗಡದ (ST) ನಾಯಕ ಶ್ರೀನಿವಾಸ್ ಟಿ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಇದರೊಂದಿಗೆ ಅತಿ ಹೆಚ್ಚು ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಬಿಗ್ ಸರ್ಪ್ರೈಸ್ ನೀಡಿದೆ.
ಇದನ್ನೂ ಓದಿ: ದಾವಣಗೆರೆ ಬೈ ಎಲೆಕ್ಷನ್: ಇಬ್ಬರ ಜಗಳದಲ್ಲಿ 3ನೇ ವ್ಯಕ್ತಿಗೆ ಟಿಕೆಟ್, ಬಿಜೆಪಿಯಲ್ಲಿ ಸಂಚಲನ
ಬಿಎಸ್ವೈ ವಿರೋಧಿ ಬಣದ ಮೇಲುಗೈ
ರಾಜ್ಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷರಾಗಿರುವ ಶ್ರೀನಿವಾಸ್ ಕಳೆದ ಹಲವು ಚುನಾವಣೆಗಳಲ್ಲಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದರು. ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇದನ್ನು ಮನಗಂಡ ಹೈಕಮಾಂಡ್ ಬಂಡಾಯ ತಡೆಯಲು ಅವರಿಗೆ ಮನ್ನಣೆ ನೀಡಿದೆ. ಮುಖ್ಯವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರೋಧಿ ಬಣದ ಮಾಜಿ ಸಂಸದ ಸಿದ್ದೇಶ್ವರ್ ತಂಡದಲ್ಲಿ ಗುರುತಿಸಿಕೊಂಡಿದ್ದರು.