ಕಳೆದ 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈದ್ ಸಂಭ್ರಮಕ್ಕೆ ತೆರೆಯದ ಅಲ್ ಅಕ್ಸಾ ಮಸೀದಿ ಬಾಗಿಲು!
ಜೆರುಸಲೇಂ (ಮಾ.21): ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಕಳೆದ 22 ದಿನಗಳಿಂದ ಭೀಕರ ಯುದ್ಧ ನಡೆಯುತ್ತಿರುವುದರಿಂದ ಈ ಬಾರಿ ಈದ್ ಹಬ್ಬದ ಸಂಭ್ರಮ ಕಳೆಗುಂದಿದೆ. ಭದ್ರತಾ ಕಾರಣಗಳಿಗಾಗಿ ಇಸ್ರೇಲ್‌ನ ಜೆರುಸಲೇಂನಲ್ಲಿರುವ ಐತಿಹಾಸಿಕ ಅಲ್-ಅಕ್ಸಾ ಮಸೀದಿಯನ್ನು ಈದ್ ಪ್ರಾರ್ಥನೆಗಾಗಿ ಮುಚ್ಚಲಾಗಿದೆ. 1967ರ ಅರಬ್-ಇಸ್ರೇಲ್ ಯುದ್ಧದ ನಂತರ ಇದೇ ಮೊದಲ ಬಾರಿಗೆ ಅಲ್-ಅಕ್ಸಾ ಮಸೀದಿಯನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದು ವಿಶೇಷ. ಮುಸ್ಲಿಮರಿಗೆ ಮೆಕ್ಕಾ ಮತ್ತು ಮದೀನಾದ ನಂತರ ಇದು ಮೂರನೇ ಅತ್ಯಂತ ಪವಿತ್ರ ಸ್ಥಳವಾಗಿದೆ. ಇರಾನ್‌ನಲ್ಲಿ ಶುಕ್ರವಾರ ಈದ್ ಆಚರಿಸಲಾಯಿತು. ಆದರೆ ಯುದ್ಧದ ಭೀತಿಯಿಂದ ಮಾರುಕಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಮಕ್ಕಳಿಗೆ ಈದ್ ದಿನದಂದು ದೇಶಾದ್ಯಂತ ಜನರು ನಮನ ಸಲ್ಲಿಸಿದರು. ರಂಜಾನ್ ಅಂತ್ಯದ ನಂತರ ಜನರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರೂ, ಸಂಭ್ರಮದ ಬದಲು ಶೋಕದ ವಾತಾವರಣವೇ ಹೆಚ್ಚಾಗಿತ್ತು.
ಜೆರುಸಲೇಂಗೆ ಸಾರ್ವಜನಿಕರ ಪ್ರವೇಶ ನಿಷೇಧ
ಫೆಬ್ರವರಿ 28 ರಂದು ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಯುದ್ಧ ಘೋಷಿಸಿದ ನಂತರ, ಇಸ್ರೇಲ್ ಅಧಿಕಾರಿಗಳು ಜೆರುಸಲೇಂ ನಗರವನ್ನು ಸಾರ್ವಜನಿಕರಿಗೆ ಬಂದ್ ಮಾಡಿದ್ದಾರೆ. ಕೇವಲ ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಮಾರ್ಚ್ 6 ರಿಂದ ಅಲ್-ಅಕ್ಸಾ ಮಸೀದಿ, ವೆಸ್ಟರ್ನ್ ವಾಲ್ ಮತ್ತು ಹೋಲಿ ಸೆಪಲ್ಚರ್ ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳನ್ನು ಮುಚ್ಚಲಾಗಿದೆ. ಮಸೀದಿಗಳ ಒಳಗೆ ಗರಿಷ್ಠ 100 ಮತ್ತು ಹೊರಗೆ 50 ಜನರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ.
ಶುಕ್ರವಾರ ಜೆರುಸಲೇಂನ ಹಳೆಯ ನಗರದ ದ್ವಾರಗಳ ಬಳಿ ಪ್ರಾರ್ಥನೆಗೆ ಮುಂದಾದ ನೂರಾರು ಮುಸ್ಲಿಮರು ಮತ್ತು ಪೊಲೀಸರ ನಡುವೆ ಸಂಘರ್ಷ ನಡೆದಿದ್ದು, ಪೊಲೀಸರು ಬಲಪ್ರಯೋಗ ಮಾಡಿ ಜನರನ್ನು ಚದುರಿಸಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಹಬ್ಬದ ಸಡಗರಕ್ಕೆ ಬ್ರೇಕ್
ಕತಾರ್, ಯುಎಇ ಮತ್ತು ಕುವೈತ್ ಸೇರಿದಂತೆ ಗಲ್ಫ್ ರಾಷ್ಟ್ರಗಳು ಇಂದು ಈದ್ ಆಚರಿಸುತ್ತಿವೆ. ಆದರೆ ಯುದ್ಧದ ಹಿನ್ನೆಲೆಯಲ್ಲಿ ತೆರೆದ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ.
ಯುಎಇ: ಈದ್ ಪ್ರಯುಕ್ತ ಶುಕ್ರವಾರದಿಂದ ಸೋಮವಾರದವರೆಗೆ ನಾಲ್ಕು ದಿನಗಳ ರಜೆ ಘೋಷಿಸಲಾಗಿದೆ. ಮಾಲ್ ಮತ್ತು ಸಾರ್ವಜನಿಕ ಸ್ಥಳಗಳನ್ನು ಅಲಂಕರಿಸಲಾಗಿದ್ದರೂ, ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.
ಇರಾಕ್: ಇಲ್ಲಿನ ಜನರು ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ಭಯದಲ್ಲಿದ್ದಾರೆ. ಮಕ್ಕಳು ಈದಿ (ಹಬ್ಬದ ಉಡುಗೊರೆ) ಸಂಗ್ರಹಿಸಲು ಹೊರಗೆ ಬರುವುದು ಕೂಡ ವಿರಳವಾಗಿದೆ.