‘ಹೊರ್ಮುಜ್’ ದಾಟುವ ಹಡಗುಗಳಿಗೆ ಇರಾನ್‌ನಿಂದ ಟೋಲ್; ಭಾರತಕ್ಕೂ ತಟ್ಟುತ್ತಾ ಬಿಸಿ?
ಮಧ್ಯಪ್ರಾಚ್ಯ ದೇಶಗಳ ಸಂಘರ್ಷ ನಾನಾ ರೂಪ ಪಡೆದುಕೊಂಡು ಯುದ್ಧದ ಬಿಸಿ ಹಾರ್ಮುಜ್ ಜಲಸಂಧಿದೆ ತಟ್ಟಿದೆ. ಇದೀಗ ಇರಾನ್ ಜಲಸಂಧಿಗೆ ಮತ್ತೊಂದು ಸುತ್ತಿನ ದಿಗ್ಬಂಧನ ಹಾಕಲು ಸಿದ್ಧವಾಗಿದ್ದು, ಈ ಜಲಸಂಧಿ ದಾಟುವ ಕೆಲವು ಹಡಗುಗಳು ನಿರ್ದಿಷ್ಟ ಸುಂಕ ಪಾವತಿ ಮಾಡಿ ದಾಟಬೇಕು ಎಂದು ಇರಾನ್ ಹೊಸ ನಿಯಮವನ್ನು ಜಾರಿ ಮಾಡಿರುವುದಾಗಿ ವರದಿಯಾಗಿದೆ. ಹಾರ್ಮುಜ್ ಜಲಸಂಧಿ ಪ್ರಪಂಚದ ಪ್ರಮುಖ ತೈಲ ಮಾರ್ಗವಾಗಿದೆ. ಈ ಮಾರ್ಗವನ್ನು ಜಾಗತಿಕ ತೈಲ ಸಂಪರ್ಕದ ಕೊಂಡಿ ಎಂದೇ ಕರೆಯಲಾಗುತ್ತದೆ. ಜಗತ್ತಿನ 5ನೇ ಒಂದು ಭಾಗ ಕಚ್ಚಾತೈಲ ಈ ಮಾರ್ಗವಾಗಿಯೇ ಇತರೆ ದೇಶಗಳನ್ನು ಸೇರುತ್ತದೆ.
ವರದಿಗಳ ಪ್ರಕಾರ ಇರಾನ್ ಈ ಮಾರ್ಗದಲ್ಲಿ ದಾಟುವ ಹಡಗುಗಳಿಗೆ ₹18.8 ಕೋಟಿ ಟೋಲ್ ಶುಲ್ಕ ವಿಧಿಸುವುದಾಗಿ ಘೋಷಿಸಿದೆ. ಇದು ಯುದ್ಧವನ್ನು ಇನ್ನಷ್ಟು ಭೀಕರಗೊಳಿಸುವ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳುತ್ತಾರೆ.
ಅಂದಾಜಿನ ಪ್ರಕಾರ ಪ್ರತಿದಿನ ಸುಮಾರು 20 ಮಿಲಿಯನ್ ಬ್ಯಾರೆಲ್ ತೈಲ ಹಾಗೂ ಶೇ 20 ರಷ್ಟು ನೈಸರ್ಗಿಕ ಅನಿಲ ಈ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಸಿಎನ್‌ಎನ್ ಪ್ರಕಾರ, ಸೌದಿ ಅರೇಬಿಯಾ ದೇಶಗಳು ಶೇ. 80 ರಷ್ಟು, ಯುಎಇ ಶೇ. 90 ರಷ್ಟು ಮತ್ತು ಕತಾರ್ ಶೇ. 98 ರಷ್ಟು ಆಹಾರ ಪದಾರ್ಥಗಳನ್ನು ಕೂಡ ಇದೇ ಮಾರ್ಗವಾಗಿ ಆಮದು ಮಾಡಿಕೊಳ್ಳುತ್ತವೆ.
ಟ್ರಂಪ್‌ನಿಂದ ಗಡುವು
48 ಗಂಟೆಗಳೊಳಗೆ ಹಾರ್ಮುಜ್ ಜಲಸಂಧಿಯನ್ನು ಸರಕು ಹಡಗುಗಳಿಗೆ ಮುಕ್ತಗೊಳಿಬೇಕು. ಇಲ್ಲದಿದ್ದರೇ ಭೀಕರ ದಾಳಿ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಬ್ರಿಟನ್ ಕೂಡ ಯುದ್ಧದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಇದಕ್ಕೆ ಪ್ರತಿಯಾಗಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಪ್ರತಿಕ್ರಿಯಿಸಿ, ‘ಇರಾನ್‌ಗೆ ಪ್ರತಿಕೂಲವೆಂದು ಪರಿಗಣಿಸಲಾದ ದೇಶಗಳನ್ನು ಹೊರತುಪಡಿಸಿ, ಉಳಿದೆಲ್ಲಾ ದೇಶಗಳಿಗೆ ಜಲಸಂಧಿ ಮುಕ್ತವಾಗಿದೆ’ ಎಂದು ಹೇಳಿದ್ಧಾರೆ.
ಇರಾನ್‌ನ ಭೌಗೋಳಿಕ ಅಸ್ತ್ರ
ಈವರೆಗೆ ಶಸ್ತ್ರಾಗಳಿಂದ ಯುದ್ಧ ಮಾಡುತ್ತಿದ್ದ ಇರಾನ್ ಇದೀಗ ರಾಜತಾಂತ್ರಿಕ ಯುದ್ಧಕ್ಕಿಳಿದಿದೆ. ಹಾರ್ಮುಜ್ ಜಲಸಂಧಿಯನ್ನು ದಾಟಿ ಹೋಗುವ ಹಡಗುಗಳಿಗೆ ಸುಮಾರು ₹18.8 ಕೋಟಿ ಶುಲ್ಕವನ್ನು ವಿಧಿಸುವುದಾಗಿ ಘೋಷಿಸಿದೆ. ವರದಿಗಳ ಪ್ರಕಾರ ಇದು ಹಡುಗಗಳ ಮಾಲೀಕರಿಗೆ ಭಾರೀ ಹೊರೆಯಾಗುವ ಸಾಧ್ಯತೆ ಇದೆ. ಅಲ್ಲದೇ ಇಂಧನ ಬೆಲೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.
ಸುಂಕ ಪಾವತಿಯನ್ನು ಜಾರಿಗೆ ತರುವ ಮೂಲಕ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ತನ್ನ ಸರ್ವಭೌಮತೆಯನ್ನು ಮೆರೆದಿದೆ.
ಗೆಳೆಯರಿಗೆ ಎಂದಿಗೂ ಅಡ್ಡಿ ಇಲ್ಲ!
ಅಮೆರಿಕ ಇನ್ನಷ್ಟು ದಾಳಿಗೆ ಮುಂದಾದರೇ, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ ಎಂದು ಇರಾನ್ ಎಚ್ಚರಿಸಿದೆ. ಅಲ್ಲದೇ ಆಪ್ತ ರಾಷ್ಟ್ರಗಳಿಗೆ ಈ ಮಾರ್ಗದ ಮೂಲಕ ಯತಾ ಪ್ರಕಾರ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಒಂದು ವೇಳೆ ಈ ಮಾರ್ಗ ಸಂಪೂರ್ಣ ಬಂದ್ ಆದರೆ ಜಾಗತಿಕ ಇಂಧನ ಮಾರುಕಟ್ಟೆಯು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ಪಾವತಿಗೆ ಕ್ರಿಪ್ಲೋ ಕರೆನ್ಸಿ ಬಳಕೆ
ಇರಾನ್ ಈ ಟೋಲ್ ಪಾವತಿಯಲ್ಲಿ ಕ್ರಿಪ್ಟೋ ಕರೆನ್ಸಿ ಅಥವಾ ವಿನಿಮಯದ ಮೂಲಕ ಸುಂಕವನ್ನು ಸ್ವೀಕರಿಸಲಾಗುತ್ತದೆ. ಡಿಜಿಟಲ್ ರೂಪದಲ್ಲಿ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲು ಮಧ್ಯವರ್ತಿಗಳೊಂದಿಗೆ ಚರ್ಚಿಸುತ್ತಿದೆ. ಹಡಗುಗಳನ್ನು ರೇಡಿಯೋ ಸಂಪರ್ಕದ ಮೂಲಕ ಪರಿಶೀಲಿಸಲಾಗುತ್ತದೆ.
ಹಡಗುಗಳ ಅನುಮತಿಗೂ ಮುನ್ನ ಹಡಗಿನ ಎಐಎಸ್ ಮಾಹಿತಿಯನ್ನು ಪರಿಶೀಲನೆ ನಡೆಸುವುದಾಗಿ ಇರಾನ್ ಹೇಳಿದೆ ಎಂದು ವರದಿಯಾಗಿದೆ.
ಇರಾನ್ ಆರ್ಥಿಕ ಲಾಭ
ಇರಾನ್ ಈವರೆಗೆ ಯುದ್ಧದಿಂದ ಅನುಭವಿಸಿದ ನಷ್ಟವನ್ನು ಭರಿಸಲು ಈ ಯೋಜನೆ ರೂಪಿಸುತ್ತಿರಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವರದಿಗಳ ಪ್ರಕಾರ ಯುದ್ಧಕ್ಕೂ ಮುನ್ನ ಈ ಜಲಸಂಧಿಯಲ್ಲಿ ಪ್ರತಿದಿನ 80 ರಿಂದ 130 ಸರಕು ಸಾಗಾಣಿಕಾ ಹಡಗುಗಳು ಸಂಚರಿಸುತ್ತಿದ್ದವು. ಈ ಸುಂಕ ವ್ಯವಸ್ಥೆ ಇರಾನ್‌ಗೆ ಬಹುದೊಡ್ಡ ಆರ್ಥಿಕತೆಯ ಮೂಲವಾಗಲಿದೆ.
ಭಾರತಕ್ಕೆ ಸಂಕಷ್ಟ ಇಲ್ಲವೇ?
ಸದ್ಯ ಇರಾನ್ ತನ್ನ ವಿರೋಧಿಗಳಿಗೆ ಸೇರಿದ ಹಡಗುಗಳು ಜಲಸಂಧಿ ದಾಟಲು ಅವಕಾಶ ನೀಡುತ್ತಿಲ್ಲ ಎಂದು ಹೇಳಿಕೊಂಡಿದೆ. ತನ್ನ ವಿರೋಧಿಗಳಿಗೆ ಬಿಟ್ಟು ಬೇರೆ ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಹೇಳಿದೆ. ಆದ್ದರಿಂದ ಭಾರತಕ್ಕೆ ಸದ್ಯ ತೊಂದರೆ ಉಂಟಾಗುವುದಿಲ್ಲ ಎಂಬುದು ತಜ್ಞರ ಲೆಕ್ಕಚಾರವಾಗಿದೆ. ಈ ಜಲಸಂಧಿಯಲ್ಲಿ ಸಿಲುಕಿದ್ದ ಹಡಗುಗಳು ಭಾರತವನ್ನು ತಲುಪಿವೆ. ಸದ್ಯ ಈ ನೀತಿ ಎಲ್ಲಿವರೆಗೂ ಜಾರಿ ಇರುತ್ತದೆ. ಇದರ ಪರಿಣಾಮ ಜಾಗತಿಕವಾಗಿ ಹೇಗೆ ಪ್ರಭಾವ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.