Kerala Election: ಕೇರಳದ 10 ಹೈಪ್ರೊಫೈಲ್ ಕ್ಷೇತ್ರಗಳ ವಿವರ
ಕೇರಳ ವಿಧಾನಸಭಾ ಚುನಾವಣೆ 2026ರ ಕಣ ರಂಗೇರಿದೆ. ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಹಾಗೂ ವಿರೋಧ ಪಕ್ಷ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ನಡುವೆ ಪ್ರಬಲ ಪೈಪೋಟಿ ಇದೆ. ಮತ್ತೊಂದೆಡೆ ಎನ್‌ಡಿಎ ಕೇರಳದಲ್ಲಿ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಲ್ಲಿದೆ. ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿರುವ ಟಾಪ್ 10 ಹೈಪ್ರೊಫೈಲ್ ಕ್ಷೇತ್ರಗಳ ವಿವರ ಇಲ್ಲಿದೆ.
ಸಿಪಿಐ-ಎಂ ಅಭ್ಯರ್ಥಿಯಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸತತ ಮೂರನೇ ಸಲ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ವಿಜಯನ್ ಅವರ ಭದ್ರಕೋಟೆ ಇದಾಗಿದೆ. ಎಲ್‌ಡಿಎಫ್ ಆಡಳಿತದ ಭವಿಷ್ಯ ಈ ಕ್ಷೇತ್ರದ ಫಲಿತಾಂಶದ ಮೇಲೆ ನಿಂತಿದೆ. ನಾರ್ತ್ ಪರವೂರ್ (ಎರ್ನಾಕುಲಂ)
ನಾರ್ತ್ ಪರವೂರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟಕ್ಕೆ ಈ ಕ್ಷೇತ್ರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಒಂದು ವೇಳೆ ಯುಡಿಎಫ್ ಅಧಿಕಾರಕ್ಕೇರಿದರೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿ.ಡಿ. ಸತೀಶನ್ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ.
ನೇಮಂ (ತಿರುವನಂತಪುರ)
ಕೇಸರಿ ಪಕ್ಷವು ತನ್ನ ಪ್ರದರ್ಶನವನ್ನು ಸುಧಾರಿಸಿಕೊಳ್ಳುವ ಉಮೇದಿನಲ್ಲಿದೆ. ಇದರಂತೆ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚೇಂದ್ರಶೇಖರ್ ನೇಮಂ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ನೇಮಂ ಕ್ಷೇತ್ರ ರಾಜ್ಯದಲ್ಲಿ ಬಿಜೆಪಿಯ ಪ್ರಬಲ ನೆಲೆ ಎಂದೇ ಬಿಂಬಿತವಾಗಿದ್ದು, ರಾಜೀವ್ ಅಖಾಡಕ್ಕೆ ಇಳಿದಿರುವುದು ಹೆಚ್ಚಿನ ಕುತೂಹಲ ಕೆರಳಿಸಿದೆ.
ನೇಮಂ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವ ತವಕದಲ್ಲಿದೆ. 2016ರಲ್ಲಿ ಬಿಜೆಪಿಯಿಂದ ಒ.ರಾಜಗೋಪಾಲ್ ಗೆದ್ದಿದ್ದರು. 2021ರಲ್ಲಿ ಸಿಪಿಎಂನ ವಿ.ಶಿವನ್‌ಕುಟ್ಟಿ ಗೆಲುವು ಪಡೆದಿದ್ದರು. ಪುದುಪಳ್ಳಿ (ಕೋಟಯಂ)
ಪುದುಪಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಮುಖ್ಯಮಂತ್ರಿ, ದಿವಂಗತ ಉಮ್ಮನ್ ಚಾಂಡಿ ಅವರ ಪುತ್ರ ಚಾಂಡಿ ಉಮ್ಮನ್ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಪಾಲಿಗೆ ಇದು ಭದ್ರಕೋಟೆಯಾಗಿದ್ದು, ಐದು ದಶಕಗಳ ಪರಂಪರೆಯನ್ನು ಉಳಿಸುವ ಸವಾಲು ಇದೆ. ಕೇರಳದ ಪುದುಪಳ್ಳಿ ವಿಧಾನಸಭಾ ಕ್ಷೇತ್ರದಿಂದ ಸತತ 12 ಬಾರಿ ಗೆದ್ದಿದ್ದ ಉಮ್ಮನ್ ಚಾಂಡಿ ಅವರು ಎರಡು ಅವಧಿಗೆ (2004–2006 ಹಾಗೂ 2011–2016) ಮುಖ್ಯಮಂತ್ರಿಯಾಗಿದ್ದರು.
ವಟ್ಟಿಯೂರ್‌ಕಾವ್ (ತಿರುವನಂತಪುರ)
ವಟ್ಟಿಯೂರ್‌ಕಾವ್ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಶಾಸಕ ವಿ.ಕೆ. ಪ್ರಶಾಂತ್, ಕಾಂಗ್ರೆಸ್‌ನ ಮಾಜಿ ಶಾಸಕ ಕೆ. ಮುರಳೀಧರನ್ ಮತ್ತು ಬಿಜೆಪಿಯ ಆರ್. ಶ್ರೀಲೇಖಾ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಪೈಕಿ ಶ್ರೀಲೇಖಾ ಕೇರಳದ ಮೊದಲ ಮಹಿಳಾ ಡಿಜಿಪಿ ಆಗಿದ್ದರು. ಪ್ರಸ್ತುತ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಪಾಲಕ್ಕಾಡ್
ಪಾಲಕ್ಕಾಡ್ ಕ್ಷೇತ್ರದಲ್ಲಿ ಜನಪ್ರಿಯ ಹಾಸ್ಯ ನಟ, ಕಾಂಗ್ರೆಸ್‌ನ ರಮೇಶ್ ಪಿಶಾರಡಿ ಮತ್ತು ಬಿಜೆಪಿಯ ಫೈರ್‌ಬ್ರ್ಯಾಂಡ್ ನಾಯಕಿ ಶೋಭಾ ಸುರೇಂದ್ರನ್ ಮಧ್ಯೆ ಪ್ರಬಲ ಪೈಪೋಟಿ ನಡೆಯುತ್ತಿದೆ. ಇಲ್ಲಿ ಎಡಪಕ್ಷಗಳ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಎನ್.ಎಂ.ಆರ್. ರಜಾಕ್ ಕಣಕ್ಕಿಳಿದಿದ್ದಾರೆ. ಹರಿಪಾಡ್ (ಆಲಪ್ಪುಳ)
ಕಾಂಗ್ರೆಸ್‌ನ ಹಿರಿಯ ನಾಯಕ, ವಿರೋಧ ಪಕ್ಷದ ಮಾಜಿ ನಾಯಕ ರಮೇಶ್ ಚೆನ್ನಿತ್ತಲ ಅವರು ಸ್ಪರ್ಧಿಸುತ್ತಿರುವ ಈ ಕ್ಷೇತ್ರ ಯುಡಿಆಫ್ ಪಾಲಿಗೆ ನಿರ್ಣಾಯಕವೆನಿಸಿದೆ. ಸಿಪಿಐ ಪಕ್ಷದಿಂದ ಟಿ.ಟಿ. ಜಿಸ್ಮೊನ್ ಮತ್ತು ಬಿಜೆಪಿಯ ಸಂದೀಪ್ ವಾಚಸ್ಪತಿ ಕಣದಲ್ಲಿದ್ದಾರೆ.
ಕಳಕೂಟ್ಟಂ (ತಿರುವನಂತಪುರಂ)
ತಾಂತ್ರಿಕ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಕಳಕೂಟ್ಟಂ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಅವರು ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ. ಮತ್ತೊಂದೆಡೆ ಸಿಪಿಐಎಂನ ಮಾಜಿ ಸಚಿವ ಕಡಕಂಪಳ್ಳಿ ಸುರೇಂದ್ರನ್, ಸತತ ಮೂರನೇ ಬಾರಿಗೆ ಗೆಲ್ಲುವ ಇರಾದೆಯಲ್ಲಿದ್ದಾರೆ. ಕಾಂಗ್ರೆಸ್‌ನ ಟಿ. ಶರತ್ ಚಂದ್ರ ಪ್ರಸಾದ್ ಸಹ ಸ್ಪರ್ಧೆಯಲ್ಲಿದ್ದಾರೆ. ಮಂಜೇಶ್ವರ (ಕಾಸರಗೋಡು)
ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಂಜೇಶ್ವರ ಕ್ಷೇತ್ರದಲ್ಲಿ ಹಾಲಿ ಶಾಸಕ ಎ.ಕೆ.ಎಂ ಅಶ್ರಫ್ ಮತ್ತು ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿ ಸುರೇಂದ್ರನ್‌ಗೆ ಅತ್ಯಲ್ಪ ಮತಗಳ ಸೋಲು ಎದುರಾಗಿತ್ತು. ಎಲ್‌ಡಿಎಫ್‌ನಿಂದ ಕೆ.ಆರ್. ಜಯನಂದನ್ ಕಣದಲ್ಲಿದ್ದಾರೆ. ಕಾಸರಗೋಡು
ಕಾಸರಗೋಡು ಕ್ಷೇತ್ರದಲ್ಲಿ ಪ್ರಮುಖವಾಗಿಯೂ ಯುಡಿಎಫ್‌ನ ಕಲ್ಲಟ್ರ ಮಾಹೀನ್ ಹಾಜಿ ಮತ್ತು ಎನ್‌ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ನಡುವೆ ಸ್ಪರ್ಧೆ ಏರ್ಪಟ್ಟಿದೆ. ಅಲ್ಲದೆ ಎಲ್‌ಡಿಎಫ್ ಬೆಂಬಲದೊಂದಿಗೆ ಶಾನವಾಸ್ ಪದೂರ್ ಅಖಾಡಕ್ಕಿಳಿದಿದ್ದಾರೆ. ಕಳೆದ ಬಾರಿ ಬಿಜೆಪಿಯ ಕೆ. ಶ್ರೀಕಾಂತ್ ಅವರನ್ನು ಮಣಿಸಿದ್ದ ಯುಡಿಎಫ್‌ನ ಎನ್.ಎ. ನೆಲ್ಲಿಕುನ್ನು ಗೆಲುವು ದಾಖಲಿಸಿದ್ದರು.