Fuel Crisis: ದೇಶಾದ್ಯಂತ ಪೆಟ್ರೋಲ್, ಡೀಸೆಲ್‌ಗೆ ಹಾಹಾಕಾರ? ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಕ್ಯೂ!
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಇಂಧನ ಪೂರೈಕೆಯಲ್ಲಿನ ಅನಿಶ್ಚಿತತೆಯಿಂದಾಗಿ ದೇಶದಾದ್ಯಂತ ಜನರು ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಖರೀದಿಸಲು ಮುಗಿಬೀಳುತ್ತಿದ್ದಾರೆ. ದೇಶದಲ್ಲಿ ಇಂಧನಕ್ಕೆ ಯಾವುದೇ ಕೊರತೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದರೂ, ಈ ಪರಿಸ್ಥಿತಿ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಭಾರತಕ್ಕೆ ಶೇ. 40ರಷ್ಟು ಕಚ್ಚಾ ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿ ಬಹುತೇಕ ಬಂದ್ ಆಗಿರುವುದು ಹಡಗು ಸಂಚಾರ ಮತ್ತು ಅನಿಲ ಪೂರೈಕೆಗೆ ಅಡ್ಡಿಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಅನೇಕ ಬಳಕೆದಾರರು ಪೆಟ್ರೋಲ್ ಬಂಕ್‌ಗಳ ಮುಂದಿನ ಜನಜಂಗುಳಿಯ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್, ಸೂರತ್, ಅಹಮದಾಬಾದ್, ಕಚ್, ನಾಗ್ಪುರ ಮತ್ತು ಇಂದೋರ್‌ನಂತಹ ನಗರಗಳಲ್ಲಿ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ತಮ್ಮ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಒಬ್ಬ ಬಳಕೆದಾರರು, 'ನಾನು ಮಾರ್ಚ್ 15 ರಂದು ಸಿಲಿಂಡರ್ ಬುಕ್ ಮಾಡಿದ್ದೆ. 11 ದಿನಗಳಾದರೂ ಇನ್ನೂ ಡೆಲಿವರಿ ಆಗಿಲ್ಲ. ಈಗ ನನ್ನ ಮನೆಯಿಂದ 100 ಮೀಟರ್ ದೂರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನಲ್ಲಿ 'NO STOCK' ಅಂತ ಬೋರ್ಡ್ ಹಾಕಿದ್ದಾರೆ' ಎಂದು ಬರೆದುಕೊಂಡಿದ್ದಾರೆ.