Davanagere By Election: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಮೇಜರ್ ಸರ್ಜರಿ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಉಚ್ಚಾಟನೆ!
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ (Davanagere By Election) ಚುನಾವಣಾ ಕಾವು ಜೋರಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಉಪಚುನಾವಣೆ ಇದ್ದು, ರಾಜಕೀಯ ರಂಗು ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಇದೀಗ ಈ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ (Congress) ಬಂಡಾಯದ ಬಿಸಿ ಇನ್ನಷ್ಟು ಹೆಚ್ಚಾಗಿದೆ. ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಓರ್ವನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಬರೋಬ್ಬರಿ 6 ವರ್ಷ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.
ಹೌದು, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಎಚ್. ಸುಭಾನ್ ಸಾಬ್ ಅವರನ್ನು ಪಕ್ಷವು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಈ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಉಚ್ಚಾಟನೆ
ಸುಭಾನ್ ಸಾಬ್ ಕಾಂಗ್ರೆಸ್ ಪಕ್ಷದಲ್ಲಿ ದೀರ್ಘಕಾಲದಿಂದಲೂ ಕಾರ್ಯಕರ್ತರಾಗಿ, ನಂತರ ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪಕ್ಷವು ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿದ್ದಕ್ಕೆ ಅಲ್ಪಸಂಖ್ಯಾತ ಸಮುದಾಯದಲ್ಲಿ ಅಸಮಾಧಾನ ಹುಟ್ಟಿತ್ತು. ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಯನ್ನು ಪಕ್ಷ ಗಮನಿಸದೇ ಹೋದುದರಿಂದ ಕೆಲವು ನಾಯಕರು ಬಂಡಾಯ ಎದ್ದಿದ್ದರು.