ಅಲ್ಪಸಂಖ್ಯಾತರ ಬಗ್ಗೆ ವಿಜಯೇಂದ್ರ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಸೋಜಿಗ: ಬಿ.ಕೆ.ಹರಿಪ್ರಸಾದ್
ದಾವಣಗೆರೆ (ಏ.07): ಸಮಾಜವಾದಿ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಇಲ್ಲಿ ಕಾಂಗ್ರೆಸ್ ಅನ್ನು ಬೆಳೆಸಿವೆ. ಕಾಂಗ್ರೆಸ್ ಅಂತೂ ಈ ನಗರವನ್ನು ಅದ್ಭುತವಾಗಿ ಬೆಳೆಸಿದೆ. ಇಲ್ಲಿನ ಕಾಂಕ್ರೀಟ್ ರಸ್ತೆಗಳಂತೂ ಬೆಂಗಳೂರಿನಲ್ಲೂ ಇಲ್ಲ. ಆದರೆ ಭಾರತೀಯ ಜನತಾ ಪಾರ್ಟಿಯವರು ಇಲ್ಲಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ಕಾಂಗ್ರೆಸ್ ಕ್ಯಾಂಪ್ ಆಫೀಸ್‌ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇಲ್ಲಿ ಅಲ್ಪಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಸೋಜಿಗ.
ಇವರ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಟ್ಟಿದ್ದಾರೆ ಎನ್ನುವುದು ಯಾರಾದರೂ ಮರೆಯಲು ಸಾಧ್ಯವೇ? ದೇಶದಲ್ಲಿರುವ ಇಂಧನ ಸಮಸ್ಯೆ, ವಾಣಿಜ್ಯ ಅನಿಲ ಸಮಸ್ಯೆಗಳು, ಬೆಲೆ ಏರಿಕೆಯ ಬಗ್ಗೆ ಮಾತಾಡೋದು ಬಿಟ್ಟು ನಮ್ಮ ಪ್ರಧಾನಿಯವರು ಚಲನಚಿತ್ರಗಳ ಬಗ್ಗೆ ವಿಮರ್ಶೆ ಮಾಡ್ತಾ ಕೂತಿದ್ದಾರೆ. ಇಂತಹ ದುರ್ಗತಿ ಪ್ರಧಾನಿಯವರಿಗೆ ಬರಬಾರದಿತ್ತು. ಜನರ ಕಷ್ಟಗಳಿಗೆ ಪರಿಹಾರವೇನು ಎಂಬ ಬಗ್ಗೆ ಬಿಜೆಪಿಯವರಿಗೆ ಕಿಂಚಿತ್ ಕಾಳಜಿಯಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕ ರಾಜ್ಯವು ಶಾಂತಿ ಸುಭಿಕ್ಷೆಯಿಂದ ಕೂಡಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ತಂದು ದೇಶದ ಜನರ ಹಸಿವು ತಣಿಸಿದ್ದು ಕಾಂಗ್ರೆಸ್ ಸರ್ಕಾರ. ಆದರೆ, ಭಾಜಪದ ಮಾಸ್ಟರ್ ಸ್ಟ್ರೋಕ್ ಏನು? ಜನರನ್ನು ಸರತಿಯ ಸಾಲಿನಲ್ಲಿ ನಿಲ್ಲಿಸಿ ಅವರನ್ನು ಹೈರಾಣಾಗಿಸುವುದೇ? ನಾವು ಮಾಡಿರುವ ಯೋಜನೆಗಳ ಹೆಸರು ಬದಲಾಯಿಸಿದ್ದು ಮಾತ್ರ ಇವರ ಸಾಧನೆ ಯಾಗಿದೆ ಎಂದು ಹೇಳಿದರು.