ರಂಗಕ್ಕೆ ಬಾರದೆ ಸದ್ದಿಲ್ಲದೆ ಯುದ್ಧ ವಿರಾಮದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಚೀನಾ
ಬೀಜಿಂಗ್: ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಯುದ್ಧ ವಿರಾಮದಲ್ಲಿ ಇರಾನ್‌ನ ಬಹುದೊಡ್ಡ ವ್ಯಾಪಾರ ಪಾಲುದಾರ ದೇಶ ಚೀನಾದ ಪಾತ್ರವಿರುವ ಸಾಧ್ಯತೆ ಕಂಡುಬಂದಿದೆ. ಇರಾನ್ ಅನ್ನು ಸಂಧಾನಕ್ಕೆ ಕರೆತರುವಲ್ಲಿ ಚೀನಾ ಸಹಾಯ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ಇದಕ್ಕೆ ಇಂಬು ನೀಡಿದೆ. ಯುದ್ಧ ವಿರಾಮ ಮಾತುಕತೆಯಲ್ಲಿ ಚೀನಾ ಪಾತ್ರವಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ಎಂದು ಹೇಳಿದ್ದಾರೆ.
ಮೇ ಮಧ್ಯಭಾಗದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾಗೆ ಭೇಟಿ ನೀಡಲಿದ್ದು, ಅದಕ್ಕೂ ಮುನ್ನ ಯುದ್ಧ ವಿರಾಮವು ಉತ್ತಮ ಬೆಳವಣಿಗೆಯಾಗಿದೆ ಎಂದು ವರದಿ ತಿಳಿಸಿದೆ.
ಮಾರ್ಚ್ ಅಂತ್ಯದಲ್ಲೇ ನಿಗದಿಯಾಗಿದ್ದ ಭೇಟಿ ಯುದ್ಧ ತೀವ್ರ ಸ್ವರೂಪ ಪಡೆದಿದ್ದರಿಂದ ಮುಂದೂಡಿಕೆಯಾಗಿತ್ತು.
ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿರುವ ಪ್ರಕಾರ, ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಸೇರಿದಂತೆ ಮಧ್ಯವರ್ತಿಗಳೊಂದಿಗೆ ಕೆಲಸ ಮಾಡುವ ಮೂಲಕ ಇರಾನ್ ಅನ್ನು ಶಾಂತಿಯ ಹಾದಿಯತ್ತ ಕೊಂಡೊಯ್ಯುವ ಮೂಲಕ ಚೀನಾ ಪ್ರಭಾವಶಾಲಿ ಪಾತ್ರ ನಿರ್ವಹಿಸಿದೆ. ಸಂಧಾನ ಮಾತುಕತೆ ನಡೆಯುತ್ತಿದ್ದಾಗ ಚೀನಾ ಅಧಿಕಾರಿಗಳು ನಿರಂತರವಾಗಿ ಇರಾನ್ ಅಧಿಕಾರಿಗಳ ಸಂಪರ್ಕದಲ್ಲಿದ್ದರು ಎಂದು ವರದಿ ತಿಳಿಸಿದೆ.
ತನ್ನ ಪಾತ್ರದ ಬಗ್ಗೆ ಚೀನಾ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಚೀನಾವು ಮಧ್ಯವರ್ತಿ ಪಾತ್ರವನ್ನು ನಿರ್ವಹಿಸುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಚೀನಾ ಮಹತ್ವದ ಪಾತ್ರ ನಿರ್ವಹಿಸಿದ್ದು, ಚೀನಾ ವಿದೇಶಾಂಗ ಸಚಿವಾಲಯ ಈವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಯುದ್ಧ ಆರಂಭವಾದಾಗಿನಿಂದ ಶಾಂತಿ ಸ್ಥಾಪನೆಗೆ ಚೀನಾ ಅವಿರತ ಶ್ರಮಿಸುತ್ತಿದೆ ಎಂದು ಅಮೆರಿಕದಲ್ಲಿರುವ ಚೀನಾ ರಾಯಭಾರಿ ಹೇಳಿದ್ದರು.
ಎಲ್ಲ ದೇಶಗಳು ಯುದ್ಧ ಅಂತ್ಯಕ್ಕೆ ಪ್ರಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮೌ ನಿಂಗ್ ಹೇಳಿದ್ದರು. ಜಾಗತಿಕ ಆರ್ಥಿಕತೆ ಮತ್ತು ಆರ್ಥಿಕ ಭದ್ರತೆ ಮೇಲೆ ಯುದ್ಧದ ಪರಿಣಾಮದ ಬಗ್ಗೆ ಚೀನಾ ಬಹಳ ಕಳವಳ ಗೊಂಡಿರುವುದಾಗಿಯೂ ಅವರು ಹೇಳಿದ್ದರು.