‘ಸಂಯೋಜಿತ ಕಾರ್ಯಾಚರಣೆ ಈಗಿನ ತುರ್ತು’
ಬೆಂಗಳೂರು: ‘ಭಾರತೀಯ ಸೇನೆಯ ಮೂರೂ ಪಡೆಗಳು ಒಟ್ಟಿಗೇ ಕೆಲಸ ಮಾಡುವಂತಹ ‘ಬಹು–ಪಡೆ ಕಾರ್ಯಾಚರಣೆ ವ್ಯವಸ್ಥೆ’ ಈ ಹೊತ್ತಿನ ತುರ್ತು’ ಎಂದು ಸಂಯೋಜಿತ ರಕ್ಷಣಾ ಪಡೆ ಮುಖ್ಯಸ್ಥ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಹೇಳಿದರು. ಭಾರತೀಯ ವಾಯುಪಡೆಯು ಇಲ್ಲಿ ಆಯೋಜಿಸಿರುವ ಎರಡು ದಿನಗಳ ಬಹು–ಪಡೆ ಕಾರ್ಯಾಚರಣೆ ವ್ಯವಸ್ಥೆ ಕುರಿತ, ‘ರಣ ಸಂವಾದ–2026’ ಅನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ನಮ್ಮ ಮೂರೂ ಪಡೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯಿಂದ ನೂತನ ವ್ಯವಸ್ಥೆಗೆ ಶೀಘ್ರವೇ ಪರಿವರ್ತನೆಯಾಗಬೇಕು’ ಎಂದರು.
‘ರಕ್ಷಣಾ ತಂತ್ರಗಾರಿಕೆ ಪ್ರತಿದಿನವೂ ಹೊಸರೂಪ ಪಡೆದುಕೊಳ್ಳುತ್ತಿದೆ.
ಭಾರತದ ಭೂಗಡಿಗಳಲ್ಲಿ ಡ್ರೋನ್ ಕಣ್ಗಾವಲು, ಉಪಗ್ರಹ ಕಣ್ಗಾವಲು ಮತ್ತು ಗಸ್ತು ಮುಖ್ಯವಾಗುತ್ತದೆ. ಇವುಗಳ ಜತೆಯಲ್ಲಿ ಸೈಬರ್ ಯುದ್ಧ ತಂತ್ರಗಾರಿಕೆಗಳು, ಅವುಗಳಿಗೆ ಪೂರಕ ವಾಗಿ ಬಾಂಬರ್ ಯುದ್ಧವಿಮಾನಗಳು ಮತ್ತು ರಕ್ಷಣಾ ಹೆಲಿಕಾಪ್ಟರ್–ವಿಮಾನ ಗಳ ಅಗತ್ಯವಿದೆ. ಈ ಎಲ್ಲವೂ ಒಟ್ಟಿಗೇ ಕೆಲಸ ಮಾಡಬೇಕು’ ಎಂದರು.
‘ಈ ಮೊದಲು ಯುದ್ಧದ ಸಂದರ್ಭದಲ್ಲಿ ಬಾಂಬ್ ದಾಳಿ ನಡೆಯಬಹುದು, ಗಡಿ ಅತಿಕ್ರಮಣ ನಡೆಯಬಹುದು ಎಂದು ಎಣಿಸಲಾಗುತ್ತಿತ್ತು. ಆದರೆ ಈಗ ನಮ್ಮ ಸೇನಾಪಡೆಗಳ ದತ್ತಾಂಶ ಕೇಂದ್ರ ಅಥವಾ ನಿಯಂತ್ರಣ ಕೊಠಡಿಯ ಮೇಲೆ ಸೈಬರ್ ದಾಳಿ ನಡೆಸಬಹುದು. ಬಾಂಬ್ ದಾಳಿಗಿಂತ ಹೆಚ್ಚು ಅಪಾಯಕಾರಿಯಾದ ದಾಳಿ ಇದು’ ಎಂದು ವಿವರಿಸಿದರು.
‘ಬಹು–ಪಡೆ ಕಾರ್ಯಾಚರಣೆ ವ್ಯವಸ್ಥೆಗೆ ಈಗಿನ ಅಮೆರಿಕ–ಇಸ್ರೇಲ್ ಮತ್ತು ಇರಾನ್ ಯುದ್ಧವು ನಮಗೆ ಉತ್ತಮ ಉದಾಹರಣೆ. ಅಮೆರಿಕ ಮತ್ತು ಇಸ್ರೇಲ್ ಯುದ್ಧವಿಮಾನಗಳ ಮೂಲಕ ಬಾಂಬ್ ದಾಳಿ ಮತ್ತು ಯುದ್ಧನೌಕೆಗಳ ಮೂಲಕ ಕ್ಷಿಪಣಿ ದಾಳಿ ನಡೆಸಿದವು. ಇದಕ್ಕೆ ಪ್ರತಿಯಾಗಿ ಇರಾನ್ ದೂರಗಾಮಿ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿಕೊಂಡಿತು. ಹೊರ್ಮುಜ್ ಜಲಸಂಧಿ ಯನ್ನು ಮುಚ್ಚುವ ಮೂಲಕ ಭೌಗೋಳಿಕ ಲಕ್ಷಣವನ್ನೂ ಯುದ್ಧದ ಒಂದು ಅಸ್ತ್ರವನ್ನಾಗಿ ಪ್ರಯೋಗಿಸಿತು’ ಎಂದರು.