ಇನ್‌ಸ್ಟಾಗ್ರಾಮ್ 'ರೀಲ್ಸ್' ನನ್ನ ಜೀವ ಉಳಿಸಿತು.. ದೋಣಿ ದುರಂತದಲ್ಲಿ ಬದುಕುಳಿದ ಮಹಿಳೆಯ ಮಾತು
ಮಥುರಾ: ಇತ್ತೀಚೆಗೆ ಉತ್ತರ ಪ್ರದೇಶದ ಮಥುರಾದ ಯಮುನಾ ನದಿಯಲ್ಲಿ ನಡೆದ ಭೀಕರ ದೋಣಿ ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೆ ಈ ಸಾವಿನ ದವಡೆಯಿಂದ ಲೂಧಿಯಾನದ 54 ವರ್ಷದ ಮಹಿಳೆಯೊಬ್ಬರು ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ, ಇದೀಗ ಮಹಿಳೆ ಮಾಧ್ಯಮದವರ ಮುಂದೆ ತಾನು ಈ ದುರಂತದಲ್ಲಿ ಬದುಕಿ ಬಂದಿರುವ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಘಟನೆ ಕುರಿತು ಮಾಹಿತಿ ನೀಡಿದ ಮಹಿಳೆ ಕಳೆದ ವಾರ ಬೃಂದಾವನದ ಕೇಶಿ ಘಾಟ್ ಬಳಿ ಸುಮಾರು 38 ಯಾತ್ರಿಕರಿದ್ದ ದೋಣಿಯೊಂದು ಸೇತುವೆಯ ದಂಡೆಗೆ ಡಿಕ್ಕಿ ಹೊಡೆದು ಮಗುಚಿತ್ತು. ಈ ವೇಳೆ ನಾನು ಸೇರಿ ದೋಣಿಯಲ್ಲಿದ್ದವರೆಲ್ಲರೂ ನೀರಿಗೆ ಬಿದ್ದು ಮುಳುಗಲಾರಂಭಿಸಿದ್ದೇವೆ ಅಲ್ಲದೆ ನನ್ನ ಜೊತೆಗಿದ್ದ ಕೆಲವರು ಗಾಬರಿಗೊಂಡು ನೀರು ಕುಡಿದು ಉಸಿರುಗಟ್ಟಿ ನೀರಿನಲ್ಲಿ ಮುಳುಗಿದ್ದಾರೆ.
ಆದರೆ ನನಗೆ ದೋಣಿ ಮಗುಚಿದ ಕೂಡಲೇ ನನ್ನ ನೆನಪಿಗೆ ಬಂದಿದ್ದು ನಾನು ಹಿಂದೊಮ್ಮೆ ನೋಡಿದ್ದ ಇನ್‌ಸ್ಟಾಗ್ರಾಮ್ ರೀಲ್ಸ್. ಆ ರೀಲ್ಸ್ ನಲ್ಲಿ ನೀರಿನಲ್ಲಿ ಮುಳುಗುವಾಗ ಬಚಾವಾಗೋದು ಹೇಗೆ ಎಂಬುದಾಗಿತ್ತು, ಈ ರೀಲ್ಸ್ ನಲ್ಲಿ ನೀಡಿದ ಸಲಹೆಯಂತೆ, ನೀರಿನಲ್ಲಿ ಬಿದ್ದ ತಕ್ಷಣ ಗಾಬರಿಯಾಗದೆ ಬಾಯಿ ಮುಚ್ಚಿ ಉಸಿರು ಬಿಗಿ ಹಿಡಿದೆ ಇದರಿಂದ ಶ್ವಾಸಕೋಶಕ್ಕೆ ನೀರು ಸೇರುವುದನ್ನು ತಡೆಯಲು ಸಾಧ್ಯವಾಯಿತು. ಬಳಿಕ ಕೈಗಳನ್ನು ನೇರವಾಗಿ ಚಾಚಿ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಂಡೆ ಇದಾದ ಬಳಿಕ ನಿರಂತರವಾಗಿ ಕಾಲುಗಳನ್ನು ಬಡಿಯುತ್ತಾ ನೀರಿನ ಮೇಲ್ಮೈಗೆ ಬರಲು ಪ್ರಯತ್ನಿಸಿದೆ. ಈ ರೀತಿ ತೇಲುತ್ತಾ ಕೆಲ ಹೊತ್ತು ಪ್ರಾಣ ಉಳಿಸಿಕೊಂಡೆ ಇದಾದ ಬಳಿಕ ನನ್ನ ಬಳಿ ರಕ್ಷಣಾ ತಂಡ ಧಾವಿಸಿ ನನ್ನ ರಕ್ಷಣೆ ಮಾಡಿದೆ, ಅಲ್ಲದೆ ನನ್ನ ಬಳಿ ನೀರಿನಲ್ಲಿ ಮುಳುಗಿದ ಓರ್ವ ಮಹಿಳೆ ಹಾಗೂ ಯುವಕನ ರಕ್ಷಣೆಯನ್ನೂ ರಕ್ಷಣಾ ತಂಡ ಮಾಡಿತ್ತು ಎಂದು ಹೇಳಿಕೊಂಡಿದ್ದಾರೆ.