Select Location
All Locations
State
Region
City / District
ನಿಮ್ಮ ತಂತ್ರಗಾರಿಕೆಗೆ ಚಾಣಕ್ಯನೇ ದಂಗಾಗುತ್ತಿದ್ದರು: ಶಾ ಕಾಲೆಳೆದ ಪ್ರಿಯಾಂಕಾ

ನಿಮ್ಮ ತಂತ್ರಗಾರಿಕೆಗೆ ಚಾಣಕ್ಯನೇ ದಂಗಾಗುತ್ತಿದ್ದರು: ಶಾ ಕಾಲೆಳೆದ ಪ್ರಿಯಾಂಕಾ

ಹಾಸ್ಯ ಹಾಗೂ ತೀಕ್ಷ್ಣ ವಾಗ್ವಾದಕ್ಕೆ ಲೋಕಸಭೆ ಗುರುವಾರ ಸಾಕ್ಷಿಯಾಯಿತು. ಮೂರು ಮಸೂದೆಗಳ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾಲೆಳೆದಿದ್ದಾರೆ. ಒಂದು ವೇಳೆ ಚಾಣಕ್ಯ ಇಂದು ಬದುಕಿದ್ದರೆ, ನಿಮ್ಮ ರಾಜಕೀಯ ಚಾಣಾಕ್ಷತನ ಕಂಡು ಅವರು ಬೆಚ್ಚಿಬೀಳುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ. ಮಸೂದೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಸರ್ಕಾರ ಜನರನ್ನು ವಂಚಿಸುತ್ತಿದೆ ಮತ್ತು ದೇಶದ ಸಮಗ್ರತೆಯ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು. ಒಂದೆಡೆ ಮಹಿಳಾ ಮೀಸಲಾತಿಯ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ಒಬಿಸಿ ಸಮುದಾಯಗಳ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. 

ಸಣ್ಣ ರಾಜ್ಯಗಳ ಪ್ರಭಾವವನ್ನು ಕಡಿಮೆ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಮೂಲಕ ಮುಂದಿನ ಚುನಾವಣೆಗೆ ಬಲವಾದ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಪ್ರಿಯಾಂಕಾ, ಅಮಿತ್ ಶಾ ಅವರನ್ನು ತೋರಿಸುತ್ತಾ ಆರೋಪಿಸಿದರು. ಈ ವೇಳೆ ಅಮಿತ್ ಶಾ ಅವರು ನಗುತ್ತಿರುವಂತೆ ಕಂಡುಬಂದರು. ಅವರತ್ತ ಬೆರಳು ಮಾಡಿ ತೋರಿಸಿದ ಪ್ರಿಯಾಂಕಾ, ಗೃಹ ಸಚಿವರು ನಗುತ್ತಿದ್ದಾರೆ... ಈ ಸಂಪೂರ್ಣ ಯೋಜನೆಯನ್ನು ಅವರೇ ರೂಪಿಸಿದ್ದಾರೆ. ಒಂದು ವೇಳೆ ಚಾಣಕ್ಯ ಬದುಕಿದ್ದರೆ ನಿಮ್ಮ 'ರಾಜಕೀಯ ಚಾಣಾಕ್ಷತನವನ್ನ' ಕಂಡು ಅವರೇ ದಂಗಾಗುತ್ತಿದ್ದರು. ಅವರೇ (ಅಮಿತ್‌ ಶಾ) ಇಡೀ ಯೋಜನೆಯನ್ನು ರೂಪಿಸಿದ್ದಾರೆ. ಈಗ ನೋಡಿ ನಗುತ್ತಿದ್ದಾರೆ... ಅಂದರೆ ಅವರು ನನ್ನ ಮಾತನ್ನು ಒಪ್ಪುತ್ತಿದ್ದಾರೆ ಎಂದು ಕುಟುಕಿದ್ದಾರೆ.


Prajavani 5 days ago
Home Flash News