ಗಗನಯಾನ 2027: ಇಸ್ರೋ ಕನಸಿಗೆ ಅಡ್ಡಿಯಾಗುತ್ತಿದೆಯೇ ಕಠಿಣ ವಾಸ್ತವ?
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಎಂದರೆ ಅದು ಗಗನಯಾನ. ಭಾರತೀಯ ಗಗನಯಾತ್ರಿಗಳನ್ನು ಸ್ವದೇಶಿ ತಂತ್ರಜ್ಞಾನದ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸುವ ಈ ಸಾಹಸಕ್ಕೆ ಇಸ್ರೋ 2027ರ ಗಡುವು ನೀಡಿದೆ. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಈ ಗುರಿ ತಲುಪುವುದು ಅಷ್ಟು ಸುಲಭವಲ್ಲ ಎನ್ನುವ ಆತಂಕ ಶುರುವಾಗಿದೆ. ಏಪ್ರಿಲ್ 11, 2026 ರಂದು ನಾಲ್ವರು ಗಗನಯಾತ್ರಿಗಳು ಚಂದ್ರನ ಸುತ್ತ ಯಶಸ್ವಿ ಪ್ರವಾಸ ಮುಗಿಸಿ ಪೆಸಿಫಿಕ್ ಸಾಗರದಲ್ಲಿ ಇಳಿಯುವ ಮೂಲಕ ಇತಿಹಾಸ ಸೃಷ್ಟಿಸಿದರು. ಅರ್ಧ ಶತಮಾನದ ನಂತರ ಮಾನವ ಮತ್ತೆ ಆಳವಾದ ಬಾಹ್ಯಾಕಾಶ ಸಂಶೋಧನೆಗೆ ಇಳಿದಿರುವುದು ಇಡೀ ಜಗತ್ತಿನ ಗಮನ ಸೆಳೆದಿದೆ.
ನಾಸಾ ಇಂತಹ ಸಾಧನೆ ಮಾಡುತ್ತಿರುವಾಗ, ಸಹಜವಾಗಿಯೇ ಎಲ್ಲರ ಕಣ್ಣು ಭಾರತದ ಗಗನಯಾನ ಮೇಲೆ ನೆಟ್ಟಿದೆ. 2022ರಲ್ಲೇ ಲಾಂಚ್ ಆಗಬೇಕಿದ್ದ ಈ ಮಿಷನ್ ಈಗ 2027ಕ್ಕೆ ಮುಂದೂಡಲ್ಪಟ್ಟಿದೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ 2027 ರಲ್ಲೂ ಉಡಾವಣೆ ಆಗೋದು ಡೌಟು ಎನ್ನಲಾಗುತ್ತಿದೆ. ಪರೀಕ್ಷಾರ್ಥ ಹಾರಾಟಗಳ ವಿಳಂಬ ಯಾವುದೇ ಮಾನವ ಸಹಿತ ಉಡಾವಣೆಗೂ ಮೊದಲು ಕನಿಷ್ಠ ಎರಡು ಪ್ರಮುಖ ಮಾನವರಹಿತ (Uncrewed) ಪರೀಕ್ಷೆಗಳು ನಡೆಯಲೇಬೇಕು. ಈ ಪರೀಕ್ಷೆಗಳಲ್ಲಿ ಗಗನಯಾತ್ರಿಗಳ ಸುರಕ್ಷತೆ, ಜೀವ ರಕ್ಷಕ ವ್ಯವಸ್ಥೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ಪಾರಾಗುವ ತಂತ್ರಜ್ಞಾನವನ್ನು (Crew Escape System) ಮಾಡಲಾಗುತ್ತದೆ. ಆದರೆ ಏಪ್ರಿಲ್ 2026 ಕಳೆದರೂ ಈ ಒಂದು ಪರೀಕ್ಷೆಯೂ ಪೂರ್ಣಗೊಂಡಿಲ್ಲ ಎಂಬುದು ಸಂಶಯಕ್ಕೆ ಕಾರಣವಾಗಿದೆ.