ಮಹಿಳಾ ಮೀಸಲಾತಿ ಜಾರಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ: ಎಂಎಲ್‌ಸಿ ಭಾರತಿ ಶೆಟ್ಟಿ
ಬೆಂಗಳೂರು: ಮಹಿಳಾ ಮೀಸಲಾತಿ ಜಾರಿಯಾಗುತ್ತಿರುವುದು ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಕ್ಷಣ. ಈ ದಿನವನ್ನು ನಾವು ಸುವರ್ಣಾಕ್ಷರದಲ್ಲಿ ಬರೆದಿಡಬೇಕು ಎಂದು ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ಬಣ್ಣಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಬರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ದಶಕಗಳ ಕಾಲದ ಕನಸು ನನಸು ಭಾರತದ 140 ಕೋಟಿ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರು ಈ ಸುದಿನಕ್ಕಾಗಿ ದಶಕಗಳಿಂದ ಕಾಯುತ್ತಿದ್ದರು. 1992ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ದೊರೆತರೆ, 1996ರಲ್ಲಿ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿ ನೀಡುವ ಪ್ರಸ್ತಾವನೆ ಮಂಡಿಸಲಾಗಿತ್ತು.
ಅಂದಿನಿಂದ ಇಂದಿನವರೆಗೆ (2023) ಮಹಿಳೆಯರು ನಿರಂತರವಾಗಿ ಈ ಹಕ್ಕಿಗಾಗಿ ಕಾಯುತ್ತಿದ್ದರು ಎಂದು ಅವರು ಹೇಳಿದರು. ಮಸೂದೆಯ ಇತಿಹಾಸವನ್ನು ನೆನಪಿಸಿಕೊಂಡ ಭಾರತಿ ಶೆಟ್ಟಿ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 4 ಬಾರಿ ಈ ಮಸೂದೆ ಮಂಡಿಸಲು ಪ್ರಯತ್ನಿಸಿದ್ದರು. ಆದರೆ ಅಂದು ವಿರೋಧ ಪಕ್ಷಗಳ ಸಹಕಾರ ಇಲ್ಲದ ಕಾರಣ ಅದು ಜಾರಿಯಾಗಲಿಲ್ಲ. ಸೋನಿಯಾ ಗಾಂಧಿಯವರು ಯುಪಿಎ ನೇತೃತ್ವ ವಹಿಸಿದ್ದಾಗಲೂ ಮಸೂದೆ ಅಂಗೀಕಾರವಾಗುವ ನಿರೀಕ್ಷೆ ಇತ್ತು. ಈ ಮಸೂದೆಗಾಗಿ ದೊಡ್ಡ ಹೋರಾಟವೇ ನಡೆದಿತ್ತು ಮತ್ತು ಕರ್ನಾಟಕದಿಂದ ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದರು. ಆದರೆ ಯುಪಿಎ ಅವಧಿಯಲ್ಲೂ ಮಸೂದೆಗೆ ಅನುಮೋದನೆ ಸಿಗಲಿಲ್ಲ ಎಂದು ವಿವರಿಸಿದರು.