Select Location
All Locations
State
Region
City / District
ಶಿಸ್ತುಕ್ರಮಕ್ಕೂ, ಉಪ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ: ದಿನೇಶ್ ಗುಂಡೂರಾವ್

ಶಿಸ್ತುಕ್ರಮಕ್ಕೂ, ಉಪ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ: ದಿನೇಶ್ ಗುಂಡೂರಾವ್

ಮಂಗಳೂರು: ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶಕ್ಕೂ ಪಕ್ಷ ವಿರೋಧಿ ಚಟುವಟಿಕೆ ಸಂಬಂಧ ಕೈಗೊಂಡ ಶಿಸ್ತು ಕ್ರಮಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿಸರು. ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, 'ಚುನಾವಣೆ ಫಲಿತಾಂಶ ಏನಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ‌. ಯಾರು ಗೆಲ್ಲುತ್ತಾರೆ ಎಂದು ಈಗಲೇ ಹೇಳಲು ನಾನು ಜ್ಯೋತಿಷಿ ಅಲ್ಲ ' ಎಂದರು. 'ವಸತಿ ಸಚಿವ ಬಿ.ಜೆಡ್.

ಜಮೀರ್ ಅಹಮ್ಮದ್‌ ಖಾನ್ ಅವನ್ನು ಸಚಿವ ಸ್ಥಾನದಿಂದ ಇಳಿಸುವುದು ಕೇವಲ ಉಹಾಪೋಹ. ಅವರು ಪಕ್ಷದ ಹಿರಿಯ ಮುಖಂಡರು. ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಆದರೆ ಕೆಲವರು ಅದಕ್ಕೆ ಬಣ್ಣ ಕಟ್ಟಲು ಹೊರಟಿರಬಹುದು. ಈ‌ ವಿಚಾರಗಳು ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗುತ್ತವೆ' ಎಂದರು.'ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ಗುರಿ ಮಾಡಲಾಗುತ್ತಿದೆ' ಎಂದು ಕಾಂಗ್ರೆಸ್ ಮುಖಂಡ ರಾಜಣ್ಣ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಈ ವಿಚಾರ ನನಗೆ ಗೊತ್ತಿಲ್ಲ. ಅದನ್ನು ರಾಜಣ್ಣ ಅವರ ಬಳಿಯೇ ಕೇಳಬೇಕು. ಇವೆಲ್ಲ ಪಕ್ಷದ ಶಿಸ್ತಿನ ವಿಚಾರ. ಕಾಂಗ್ರೆಸ್‌ನಲ್ಲಿ ಯಾರನ್ನೂ ಗುರಿಯನ್ನಾಗಿಸುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ನಲ್ಲಿ ಎಲ್ಲಾ ಧರ್ಮದವರು ಒಂದೇ. 

ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ' ಎಂದರು. 'ಸ್ಥಳೀಯಾಡಳಿತ ಚುನಾವಣೆ ನಡೆಸುವ ಬಗ್ಗೆ ಈಗಾಗಲೇ ಪ್ರಕ್ರಿಯೆಗಳು ಆರಂಭವಾಗಿವೆ. ಹೈಕೋರ್ಟ್ ಆದೇಶದ ಪ್ರಕಾರ ಜಿಬಿಎ ಚುನಾವಣೆಯನ್ನು ಜೂನ್‌ಗೆ ಮೊದಲು ನಡೆಸಬೇಕು. ಈಗಾಗಲೇ ಅದರ ಬಗ್ಗೆ ತಯಾರಿಗಳು ನಡೆದಿವೆ' ಎಂದರು 'ಚುನಾವಣೆ ನಡೆಸಲು ಹೆಚ್ಚುವರಿ ಕಾಲಾವಕಾಶ ಕೇಳಿದ ಬಗ್ಗೆ ನನಗೆ ಮಾಹಿತಿಯಿಲ್ಲ. ಚುನಾವಣೆ ನಡೆದೇ ನಡೆಯುತ್ತದೆ. ಸೆಪ್ಟೆಂಬರ್‌ನಲ್ಲಿ ನಡೆಸಲು ಹೈಕೋರ್ಟ್ ಅವಕಾಶ ಮಾಡಿ ಕೊಟ್ಟಲ್ಲಿ ಮಾಡುತ್ತೇವೆ. ಜೂನ್ ಒಳಗೆ ಮಾಡಬೇಕು ಎಂದರೆ ಅದಕ್ಕೂ ಸಿದ್ಧ' ಎಂದು ಅವರು ಹೇಳಿದರು.


Prajavani 1 hour ago
Home Flash News