ಬಿಸಿಲಿಗೆ ಇಬ್ಬರು ಭಕ್ತರ ಸಾವು ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಅಂಜನಾದ್ರಿ ಬೆಟ್ಟಕ್ಕೆ ಪ್ರವೇಶಕ್ಕಿಲ್ಲ ಅವಕಾಶ!
ಕೊಪ್ಪಳ: ಉರಿಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸುರಕ್ಷತೆಗಾಗಿ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಮಧ್ಯಾಹ್ನದ ವೇಳೆ ಬೆಟ್ಟ ಏರುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದನ್ನು ಗಮನಿಸಿ, ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. 575 ಮೆಟ್ಟಿಲುಗಳನ್ನು ಏರಿ ದರ್ಶನ ಗಂಗಾವತಿ ತಾಲೂಕಿನ ಚಿಕ್ಕರಾಂಪುರ ಗ್ರಾಮದ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭಕ್ತರು ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲ, ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ವಿಶೇಷವಾಗಿ ವಾರಾಂತ್ಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಉರಿಬಿಸಿಲಿನ ನಡುವೆಯೂ 575 ಮೆಟ್ಟಿಲುಗಳನ್ನು ಏರಿ ದರ್ಶನ ಪಡೆಯುವುದು ಅನೇಕ ಮಂದಿಗೆ ಸವಾಲಾಗುತ್ತಿದೆ. ಇಬ್ಬರ ಸಾವು ಕಳೆದ 2–3 ತಿಂಗಳ ಅವಧಿಯಲ್ಲಿ, ಬೆಟ್ಟ ಏರಿ ದರ್ಶನ ಪಡೆದ ಬಳಿಕ ಉಸಿರಾಟದ ತೊಂದರೆ ಮತ್ತು ಬಿಸಿಲಿನ ತಾಪದಿಂದ ಇಬ್ಬರು ಭಕ್ತರು ಮೃತಪಟ್ಟಿದ್ದಾರೆ. ಮಾರ್ಚ್ ತಿಂಗಳಲ್ಲಿ ಗುಜರಾತ್ ಮೂಲದ ಭಕ್ತನೊಬ್ಬ ಮೆಟ್ಟಿಲು ಏರುತ್ತಿದ್ದಾಗ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದರೆ, ಏಪ್ರಿಲ್ 1ರಂದು ಮಧ್ಯಾಹ್ನ ವೇಳೆಯಲ್ಲಿ ದಾವಣಗೆರೆ ಮೂಲದ ಮತ್ತೊಬ್ಬ ಭಕ್ತ ಗರ್ಭಗುಡಿಯಲ್ಲಿ ದರ್ಶನ ಪಡೆದ ಬಳಿಕ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ದುರ್ಘಟನೆಗಳು ಜಿಲ್ಲಾಡಳಿತವನ್ನು ಎಚ್ಚರಿಕೆಗೆ ತಂದಿವೆ.