ಏಳು ವಾರ ಕಳೆದರೂ ಖಮೇನಿ ಅಂತ್ಯಕ್ರಿಯೆ ನಡೆದಿಲ್ಲ ಏಕೆ? ಇರಾನ್ ಲೆಕ್ಕಾಚಾರಗಳೇನು?
ಟೆಹರಾನ್: ಫೆಬ್ರುವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಮಾಜಿ ಪರಮೋಚ್ಚ ಆಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಖಮೇನಿ ಸಾವು ಕುರಿತು ದೇಶದಾದ್ಯಂತ ಜನರು ಬೀದಿಗಿಳಿದು ಶೋಕ ವ್ಯಕ್ತಪಡಿಸಿದ್ದರು. ಈ ಘಟನೆಯು ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇರಾನ್‌ಗೆ ಪ್ರಚೋದನೆಯನ್ನೂ ನೀಡಿತ್ತು. ಆದರೆ, ಅಂದಿನಿಂದ ಇದುವರೆಗೆ ಏಳು ವಾರ ಕಳೆದಿದ್ದರೂ, ಆಯತೊಲ್ಲಾ ಅಲಿ ಖಮೇನಿ ಅವರ ಪಾರ್ಥಿವ ಶರೀರವನ್ನು ಇನ್ನೂ ಮಣ್ಣು ಮಾಡಿಲ್ಲ.
ಇರಾನ್‌ನ ಪರಮಾಣು ಯೋಜನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ಜಂಟಿಯಾಗಿ ಕ್ಷಿಪಣಿ ದಾಳಿಗಳನ್ನು ನಡೆಸಿದ್ದವು. ಮೊದಲ ದಾಳಿಯೇ ಪರಮೋಚ್ಚ ನಾಯಕನನ್ನು ಗುರಿಯಾಗಿಸಲಾಗಿತ್ತು. ಆ ದಾಳಿಯಲ್ಲಿ ಖಮೇನಿ ತಮ್ಮ ಕುಟುಂಬದ ಹಲವು ಸದಸ್ಯರೊಂದಿಗೆ ಸಾವಿಗೀಡಾಗಿದ್ದರು. ಅವರ ನಂತರ ಮಗ ಮೊಜ್ತಬಾ ಖಮೇನಿಯನ್ನು ಹೊಸ ಪರಮೋಚ್ಚ ನಾಯಕನನ್ನಾಗಿ ನೇಮಿಸಲಾಯಿತು. ಒಂದು ವೇಳೆ ದಿವಂಗತ ಪರಮೋಚ್ಚ ನಾಯಕನಿಗೆ ಅಂತ್ಯಕ್ರಿಯೆ ಆಯೋಜಿಸಿದರೆ, ಗೌರವ ಸಲ್ಲಿಸಲು ಲಕ್ಷಾಂತರ ಜನರು ಸೇರಬಹುದು.
ಇದು ಭದ್ರತೆಯ ದೃಷ್ಟಿಯಿಂದ ದೊಡ್ಡ ಸವಾಲಾಗಬಹುದು ಎಂಬ ಆತಂಕ ಇರಾನ್‌ಗೆ ಇದೆ. ಪ್ರಸ್ತುತ ಕದನ ವಿರಾಮ ಜಾರಿಯಲ್ಲಿದ್ದರೂ, ಇಷ್ಟು ದೊಡ್ಡ ಜನಸಮೂಹ ಸೇರುವುದು ಇಸ್ರೇಲ್‌ನ ವೈಮಾನಿಕ ದಾಳಿಗೆ ಸುಲಭ ತುತ್ತಾಗಬಹುದು ಎಂದು ಇರಾನ್ ಹೆದರುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. ‘ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸೀಸ್’ನ ಬೆಹ್ನಮ್ ತಾಲೆಬ್ಲು ಅವರನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದ್ದು, ‘ಸರಳವಾಗಿ ಹೇಳಬೇಕೆಂದರೆ, ಇರಾನ್ ಆಡಳಿತವು ಎದುರಾಗಬಹುದಾದ ಅಪಾಯದ ಬಗ್ಗೆ ಆತಂಕ ಹೊಂದಿದೆ ಮತ್ತು ಅತೀ ದುರ್ಬಲವಾಗಿದೆ’ ಎಂದು ಅವರು ಹೇಳಿದ್ದಾರೆ.