Select Location
All Locations
State
Region
City / District
ಸೌದಿ ನಾಯಕರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಹತ್ವದ ಚರ್ಚೆ

ಸೌದಿ ನಾಯಕರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಹತ್ವದ ಚರ್ಚೆ

ರಿಯಾದ್/ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದು, ಅಲ್ಲಿನ ಉನ್ನತ ನಾಯಕರೊಂದಿಗೆ ದ್ವಿಪಕ್ಷೀಯ ಸಂಬಂಧ ಹಾಗೂ ಪ್ರಾದೇಶಿಕ ವಿದ್ಯಮಾನಗಳ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ರಿಯಾದ್‌ಗೆ ಆಗಮಿಸಿದ ದೋವಲ್ ಅವರನ್ನು ಸೌದಿ ಅರೇಬಿಯಾದ ಉಪ ಸಚಿವರು ಹಾಗೂ ಭಾರತದ ರಾಯಭಾರಿ ಸುಹೇಲ್ ಖಾನ್ ಆತ್ಮೀಯವಾಗಿ ಬರಮಾಡಿಕೊಂಡರು. ಭಾರತವು ತನ್ನ ಪ್ರಮುಖ ಪಾಲುದಾರ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ದೋವಲ್ ಅವರ ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. 

ತಮ್ಮ ಭೇಟಿಯ ಅವಧಿಯಲ್ಲಿ ದೋವಲ್ ಅವರು ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್, ಇಂಧನ ಸಚಿವ ಅಬ್ದುಲ್ ಅಜೀಜ್ ಬಿನ್ ಸಲ್ಮಾನ್ ಮತ್ತು ಸೌದಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮುಸಾಯಿದ್ ಅಲ್-ಐಬಾನ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು. ಈ ಸಭೆಗಳಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಬಾಂಧವ್ಯ, ಪಶ್ಚಿಮ ಏಷ್ಯಾದ ಪ್ರಸಕ್ತ ಸನ್ನಿವೇಶ ಮತ್ತು ಪರಸ್ಪರ ಹಿತಾಸಕ್ತಿಯ ಹಲವು ವಿಷಯಗಳು ಚರ್ಚೆಗೆ ಬಂದವು ಎಂದು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯೂ ಈ ವೇಳೆ ಚರ್ಚಿಸಲಾಗಿದೆ ಎನ್ನಲಾಗಿದೆ.


Udayavani 1 hour ago
Home Flash News