ಆಪರೇಷನ್ ಸಿಂಧೂರ್ ಅಬ್ಬರ, ಪಾಕ್ ಉಗ್ರರ ಕೋಟೆಗೆ ಲಗ್ಗೆ, ಒಂದು ವರ್ಷವಾದ್ರೂ ಹೊರಬರಲು ಹೆದರುತ್ತಿದ್ದಾರೆ ಸಯೀದ್-ಅಜರ್
ಪಹಲ್ಗಾಮ್, ಏಪ್ರಿಲ್ 21: ಪಹಲ್ಗಾಮ್(Pahalgam) ದಾಳಿಯ ರಕ್ತಸಿಕ್ತ ನೆನಪುಗಳಿಗೆ ಭಾರತ ನೀಡಿದ ಪ್ರತ್ಯುತ್ತರ ಕೇವಲ ಒಂದು ಮಿಲಿಟರಿ ಕಾರ್ಯಾಚರಣೆಯಾಗಿರಲಿಲ್ಲ, ಅದು ಗಡಿಯ ಆಚೆಗಿದ್ದ ಭಯೋತ್ಪಾದಕ ಸಾಮ್ರಾಜ್ಯದ ಅಡಿಪಾಯವನ್ನೇ ನಡುಗಿಸಿದ ಚಂಡಮಾರುತ. ‘ಆಪರೇಷನ್ ಸಿಂಧೂರ್’ ಹೆಸರಿನ ಈ ಮಹಾಪ್ರಹಾರದ ರೋಚಕ ಕಥೆ ಇಲ್ಲಿದೆ. ಏಪ್ರಿಲ್ 22, 2025ರಂದು ಪಹಲ್ಗಾಮ್‌ನಲ್ಲಿ 26 ಅಮಾಯಕ ಜೀವಗಳನ್ನು ಬಲಿ ಪಡೆದ ಉಗ್ರರ ಕೃತ್ಯಕ್ಕೆ ಭಾರತ ಮೌನವಾಗಿರಲಿಲ್ಲ. ಕೇವಲ 15 ದಿನಗಳಲ್ಲಿ, ಅಂದರೆ ಮೇ 7ರಂದು ಭಾರತೀಯ ವಾಯುಪಡೆ ಮತ್ತು ವಿಶೇಷ ಪಡೆಗಳು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿತ್ತು. ಇದರ ಗುರಿ ಲಷ್ಕರ್-ಎ-ತೊಯ್ಬಾ (LeT), ಜೈಶ್-ಎ-ಮೊಹಮ್ಮದ್ (JeM) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಹುಟ್ಟಡಗಿಸುವುದಾಗಿತ್ತು.
ಭಾರತೀಯ ಕ್ಷಿಪಣಿಗಳು ಪಾಕಿಸ್ತಾನದ ಒಳಗಿರುವ ಒಂಬತ್ತು ಪ್ರಮುಖ ಅಡಗುತಾಣಗಳನ್ನು ಧೂಳೀಪಟ ಮಾಡಿದವು.ಲಾಹೋರ್ ಸಮೀಪದ 200 ಎಕರೆ ವಿಸ್ತೀರ್ಣದ ಲಷ್ಕರ್ ಕೇಂದ್ರ ಕಚೇರಿ ಮುರಿಡ್ಕೆ ಅಕ್ಷರಶಃ ಸ್ಮಶಾನವಾಯಿತು. ಜೈಶ್-ಎ-ಮೊಹಮ್ಮದ್‌ನ ಭದ್ರಕೋಟೆಯಾಗಿದ್ದ ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಕ್ಯಾಂಪಸ್ ಅನ್ನು ಭಾರತೀಯ ಪಡೆಗಳು ಗುರಿಯಾಗಿಸಿಕೊಂಡವು. ಈ ದಾಳಿಯಲ್ಲಿ ಮಸೂದ್ ಅಜರ್ ಕೇವಲ ತನ್ನ ನೆಲೆಗಳನ್ನಷ್ಟೇ ಅಲ್ಲ, ತನ್ನ ಕುಟುಂಬದ 10 ಸದಸ್ಯರನ್ನೂ ಕಳೆದುಕೊಂಡಿದ್ದಾನೆ ಎಂದು ಪಾಕ್ ಮಾಧ್ಯಮಗಳೇ ಒಪ್ಪಿಕೊಂಡವು.