Select Location
All Locations
State
Region
City / District
ಹೈಕೋರ್ಟ್​​ನಲ್ಲಿ ಸರ್ಕಾರಕ್ಕೆ ಭಾರೀ ಹಿನ್ನಡೆ.. SSLC ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನೇ ನೀಡಲು ಆದೇಶ

ಹೈಕೋರ್ಟ್​​ನಲ್ಲಿ ಸರ್ಕಾರಕ್ಕೆ ಭಾರೀ ಹಿನ್ನಡೆ.. SSLC ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನೇ ನೀಡಲು ಆದೇಶ

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೂರನೇ ಭಾಷೆಯ ಮೌಲ್ಯಮಾಪನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕಾನೂನು ಚೌಕಟ್ಟಿನಲ್ಲಿ ಹಿನ್ನಡೆಯಾಗಿದೆ. ಹಳೆಯ ಮೌಲ್ಯಮಾಪನ ಪದ್ಧತಿಯ ಬದಲಿಗೆ ಹೊಸದಾಗಿ 'ಗ್ರೇಡಿಂಗ್ ಪದ್ಧತಿ'ಯನ್ನು ಜಾರಿಗೆ ತರುವ ಸರ್ಕಾರದ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಲು ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ನ್ಯಾಯಮೂರ್ತಿ ಇ.ಎಸ್. ಇಂಡಿರೇಶ್ ಅವರ ಪೀಠವು ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ, ತನ್ನ ಏಪ್ರಿಲ್ 15ರ ಆದೇಶದ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಪರೀಕ್ಷಾ ಪ್ರಕಟಣೆ ಹೊರಡಿಸುವ ಸಮಯದಲ್ಲಿ ಯಾವ ನಿಯಮಗಳು ಮತ್ತು ಮಾನದಂಡಗಳು ಜಾರಿಯಲ್ಲಿದ್ದವೋ, ಅದರಂತೆಯೇ ಮೌಲ್ಯಮಾಪನ ನಡೆಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ. ಪ್ರಕ್ರಿಯೆಯ ಮಧ್ಯದಲ್ಲಿ ಮೌಲ್ಯಮಾಪನ ವ್ಯವಸ್ಥೆಯನ್ನು ಬದಲಿಸುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಒಂದು ವೇಳೆ ಸರ್ಕಾರಕ್ಕೆ ಹೊಸ ಗ್ರೇಡಿಂಗ್ ಪದ್ಧತಿಯನ್ನು ಜಾರಿಗೆ ತರಬೇಕೆಂಬ ಇಚ್ಛೆಯಿದ್ದರೆ, ಅದಕ್ಕೆ ಪೂರಕವಾದ ಕಾನೂನುಬದ್ಧ ತಿದ್ದುಪಡಿಗಳನ್ನು ತಂದು ಭವಿಷ್ಯದಲ್ಲಿ ಅನ್ವಯಿಸಲು ಮುಕ್ತ ಅವಕಾಶ ಕೊಟ್ಟಿದೆ.

ಇನ್ನೂ ಈ ಮಹತ್ವದ ತೀರ್ಪಿನ ಹಿಂದೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿನಿಯರ ಹಟದ ಹೋರಾಟವಿದೆ. ಮೂರನೇ ಭಾಷೆಯ ಮೌಲ್ಯಮಾಪನದಲ್ಲಿ ಗ್ರೇಡಿಂಗ್ ಪದ್ಧತಿಯನ್ನು ಪರಿಚಯಿಸುವ ಕುರಿತು ಶಿಕ್ಷಣ ಸಚಿವರು ನೀಡಿದ್ದ ಹೇಳಿಕೆಯಿಂದ ಆತಂಕಗೊಂಡಿದ್ದ ಸಹನಾ ಆರ್ ನಾಯ್ಕ್, ಅನುಷಾ ಮತ್ತು ಸುಧೀಕ್ಷಾ ಎಂಬ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಮೂಲ ಸುತ್ತೋಲೆಯ ಪ್ರಕಾರವೇ ಅಂಕಗಳನ್ನು ನೀಡುವ ವ್ಯವಸ್ಥೆಯನ್ನು ಮುಂದುವರಿಸಬೇಕೆಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.


TV9 Kannada 1 day ago
Home Flash News