US ನೌಕಾಪಡೆ ಭರ್ಜರಿ ಕಾರ್ಯಾಚರಣೆ.. ಚೀನಾದಿಂದ ಇರಾನ್‌ಗೆ ಕ್ಷಿಪಣಿ ರಾಸಾಯನಿಕ ಸಾಗಿಸುತ್ತಿದ್ದ ಹಡಗು ವಶ
ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಮತ್ತೊಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ಹಾರ್ಮುಜ್ ಜಲಸಂಧಿಯಲ್ಲಿ ಚೀನಾದಿಂದ ಇರಾನ್ ಕಡೆಗೆ ಪ್ರಯಾಣಿಸುತ್ತಿದ್ದ 'ಟೌಸ್ಕಾ' ಎಂಬ ಇರಾನಿನ ಕಂಟೇನರ್ ಹಡಗನ್ನು ಅಮೆರಿಕದ ನೌಕಾಪಡೆ ಯಶಸ್ವಿಯಾಗಿ ವಶಪಡಿಸಿಕೊಂಡಿದೆ. ಈ ಹಡಗು ಕ್ಷಿಪಣಿ ತಯಾರಿಕೆಗೆ ಬಳಸುವ ಅಪಾಯಕಾರಿ ರಾಸಾಯನಿಕಗಳನ್ನು ಸಾಗಿಸುತ್ತಿತ್ತು ಎಂದು ಅಮೆರಿಕದ ಪ್ರಮುಖ ರಾಜತಾಂತ್ರಿಕಿ ಹಾಗೂ ಭಾರತೀಯ ಮೂಲದ ನಿಕ್ಕಿ ಹ್ಯಾಲಿ ಬಹಿರಂಗಪಡಿಸಿದ್ದಾರೆ. ಅಮೆರಿಕದ ದಿಗ್ಬಂಧನದ ನಡುವೆಯೂ ಈ ಕಾರ್ಯಾಚರಣೆ ನಡೆದಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ನಿಕ್ಕಿ ಹ್ಯಾಲಿ ಅವರು ಸಾಮಾಜಿಕ ಜಾಲತಾಣ 'X' ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಹಡಗನ್ನು ನಿಲ್ಲಿಸುವಂತೆ ಅಮೆರಿಕ ನೌಕಾಪಡೆ ಪದೇ ಪದೇ ನೀಡಿದ ಎಚ್ಚರಿಕೆಯನ್ನು ಹಡಗಿನ ಸಿಬ್ಬಂದಿ ನಿರ್ಲಕ್ಷಿಸಿದ್ದರು ಎಂದು ತಿಳಿಸಿದ್ದಾರೆ. ಚೀನಾವು ಇರಾನ್‌ನ ಇಸ್ಲಾಮಿಕ್ ಆಡಳಿತಕ್ಕೆ ಕ್ಷಿಪಣಿ ತಂತ್ರಜ್ಞಾನ ಮತ್ತು ರಾಸಾಯನಿಕಗಳನ್ನು ಒದಗಿಸುವ ಮೂಲಕ ಬೆಂಬಲ ನೀಡುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ. "ಚೀನಾ ಮತ್ತು ಇರಾನ್ ನಡುವಿನ ಈ ಗುಪ್ತ ಮೈತ್ರಿಯು ಇನ್ನು ಮುಂದೆ ನಿರ್ಲಕ್ಷಿಸಲಾಗದ ಭೀಕರ ವಾಸ್ತವ" ಎಂದು ಹ್ಯಾಲಿ ಎಚ್ಚರಿಸಿದ್ದಾರೆ, ಇದು ಅಂತರಾಷ್ಟ್ರೀಯ ಭದ್ರತೆಗೆ ಇರುವ ದೊಡ್ಡ ಸವಾಲು ಎಂದು ಅವರು ಬಣ್ಣಿಸಿದ್ದಾರೆ.
ಓಮನ್ ಕೊಲ್ಲಿಯ ಇರಾನ್‌ನ ಚಾಬಹಾರ್ ಬಂದರಿನ ಕರಾವಳಿಯ ಸಮೀಪ ಈ ಹಡಗನ್ನು ವಶಕ್ಕೆ ಪಡೆಯಲಾಗಿದ್ದು, ಹಡಗು-ಟ್ರ್ಯಾಕಿಂಗ್ ಡೇಟಾ ಮೂಲಕ ಈ ಮಾಹಿತಿ ದೃಢಪಟ್ಟಿದೆ. ವಶಪಡಿಸಿಕೊಂಡ 'ಟೌಸ್ಕಾ' ಹಡಗು ಅಮೆರಿಕದ ಕಪ್ಪುಪಟ್ಟಿಯಲ್ಲಿರುವ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಶಿಪ್ಪಿಂಗ್ ಲೈನ್ಸ್ (IRISL) ಸಮೂಹಕ್ಕೆ ಸೇರಿದೆ. ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಕ್ಕೆ ಅಗತ್ಯವಿರುವ ಬಿಡಿಭಾಗಗಳು ಮತ್ತು ಕಚ್ಚಾ ವಸ್ತುಗಳನ್ನು ಸಾಗಿಸಲು ಈ ಶಿಪ್ಪಿಂಗ್ ಲೈನ್ ಅನ್ನು ಬಳಸಲಾಗುತ್ತಿದೆ ಎಂದು ಅಮೆರಿಕ 2019 ರಿಂದಲೇ ನಿರ್ಬಂಧ ವಿಧಿಸಿತ್ತು.