3AC ಮತ್ತು 3E ಕೋಚ್‌ಗಳಲ್ಲಿ ಯಾವುದು ಉತ್ತಮ? ಬುಕಿಂಗ್ ಮೊದಲು ಈ ವಿಷಯ ತಿಳಿಯಿರಿ
ಮಧ್ಯಮ ವರ್ಗದ ಜನರು ಪ್ರಯಾಣ ಮತ್ತು ಸರಕು ಸಾಗಾಣಿಕೆಗಾಗಿ ಅತೀ ಹೆಚ್ಚು ಬಳಸುವ ಸಾರಿಗೆ ಅಂದರೆ, ಅದು ರೈಲು ಎಂದು ಸುಲಭವಾಗಿ ಹೇಳಬಹುದು. ಈ ರೈಲು ಪ್ರಯಾಣದಲ್ಲಿ ಬೇರೆ ಬೇರೆ ಸೌಕರ್ಯಗಳು ಲಭ್ಯ ಇರುವುದನ್ನು ಕಾಣಬಹುದು. ಅನೇಕರು ದೂರದ ಊರುಗಳಿಗೆ ಪ್ರಯಾಣಿಸುವಾಗ ಎಸಿ ಕೋಚ್‌ಗಳನ್ನು ಬುಕ್ ಮಾಡುತ್ತಾರೆ. ಅದರಲ್ಲೂ ವಿಶೇಷವಾಗಿ 3ಎಸಿ ಮತ್ತು 3ಇ ಕೋಚ್‌ಗಳನ್ನು ಬುಕ್ ಮಾಡುತ್ತಾರೆ. ಅದಕ್ಕೂ ಮೊದಲು 3ಎಸಿ, 3ಇ ಎಂದರೇನು? ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತ.
ರೈಲಿನಲ್ಲಿ 3ಎಸಿ ಮತ್ತು 3ಇ ಎಂಬ ಎರಡು ಎಸಿ ಕೋಚ್‌ಗಳ ಆಯ್ಕೆಗಳಿರುತ್ತವೆ. ಈ ಎರಡೂ ಬೋಗಿಗಳ ನಡುವೆ ದರದಲ್ಲಿ ವ್ಯತ್ಯಾಸವಿದೆ. ದೂರದ ಪ್ರಯಾಣಕ್ಕೆ ಯಾವುದು ಉತ್ತಮ ಎಂಬುದನ್ನು ನೋಡೋಣ. 3ಎಸಿ ಎಂದರೆ, ಇದು ಭಾರತೀಯ ರೈಲ್ವೆಯ ಜನಪ್ರಿಯ ಕೋಚ್ ಆಗಿದ್ದು, ಹೆಚ್ಚು ಬೆಲೆ ಮತ್ತು ಉತ್ತಮ ಸೌಕರ್ಯವನ್ನು ಒದಗಿಸುತ್ತದೆ.
3ಇ ಎಂದರೆ ಥರ್ಡ್ ಎಸಿ ಎಕಾನಮಿ ಕೋಚ್ ಎಂದರ್ಥ. ಇದು ಕಡಿಮೆ ಬೆಲೆಯನ್ನು ಹೊಂದಿರುತ್ತದೆ. 3ಎಸಿ ಕೋಚ್‌ಗೆ ಹೋಲಿಸಿದರೆ, ಇದರ ಟೀಕೆಟ್ ಬೆಲೆ ಶೇ 10 ರಿಂದ 15ರಷ್ಟು ಕಡಿಮೆ ಇರುತ್ತದೆ. 3ಎಸಿ ಕೋಚ್ 72 ಬರ್ತ್‌ಗಳನ್ನು (ಆಸನ) ಹೊಂದಿರುತ್ತದೆ. ಆದರೆ 3ಇ ಕೋಚ್ ಸುಮಾರು 80 ರಿಂದ 83 ಬರ್ತ್‌ಗಳನ್ನು (ಆಸನ) ಹೊಂದಿರುತ್ತದೆ. 3ಇ ಕೋಚ್ ಇಕ್ಕಟ್ಟಿನಿಂದ ಕೂಡಿರುತ್ತದೆ. ಆದರೆ ಈ ಎರಡೂ ಕೋಚ್‌ಗಳು ಎಸಿ ಸ್ಲೀಪರ್ ಕೋಚ್‌ಗಳಾಗಿರುತ್ತವೆ. ರಾತ್ರಿ ಪ್ರಯಾಣಕ್ಕೆ 3ಎಸಿ ಕೋಚ್ ವಿಶಾಲವಾಗಿರುವುದರಿಂದ ಉತ್ತಮ ಆಯ್ಕೆಯಾಗಿರುತ್ತದೆ.
3ಎಸಿಗೆ ಹೋಲಿಸಿದರೆ, 3ಇ ಟಿಕೆಟ್‌ನ ಬೆಲೆ ಕಡಿಮೆ ಇರುವುದರಿಂದ, ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಲು ಬಯಸುವವರು 3ಎಸಿ ಬದಲಿ 3ಇ ಅನ್ನು ಆಯ್ಕೆ ಮಾಡಿಕೊಳ್ಳಬಹುದು. 3ಎಸಿ ವಿಶಾಲವಾದ ಸ್ಥಳಾವಕಾಶದ ಜೊತೆಗೆ ವಿಶಾಲವಾದ ಲೆಗ್ ರೂಮ್ ಇರುತ್ತದೆ. ರಾತ್ರಿ ಪ್ರಯಾಣ ಮಾಡುವವರು ಹಾಗೂ ಮೇಲ್ಬಾಗದಲ್ಲಿ ಮಲಗುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. 3ಇ ಕೋಚ್‌ಗಳು ಕಿರಿದಾದ ಬರ್ತ್‌ಗಳನ್ನು ಹೊಂದಿರುತ್ತವೆ. ಕಡಿಮೆ ಹೆಡ್‌ರೂಮ್ ಮತ್ತು ಕೋಚ್‌ನಲ್ಲಿ ಹೆಚ್ಚಿನ ಜನರು ಇರುತ್ತಾರೆ. ಈ ಎರಡು ಮಾದರಿಯ ಕೋಚ್‌ಗಳಲ್ಲಿ ಒಂದೇ ರೀತಿಯ ಸೌಲಭ್ಯ ದೊರೆಯುತ್ತದೆ.
ಹವಾನಿಯಂತ್ರಣ, ಚಾರ್ಜಿಂಗ್ ಪಾಯಿಂಟ್‌ಗಳು, ಓದಲು ವಿದ್ಯುತ್ ದೀಪಗಳು, ಹಾಸಿಗೆ ಹಾಗೂ ಪರದೆಗಳು ಇರುತ್ತವೆ. ಆದ್ದರಿಂದ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ಎರಡೂ ಒಂದೇ. ಬೆಲೆಯಲ್ಲಿ ಮಾತ್ರ ವ್ಯತ್ಯಾಸ ಕಾಣಬಹುದು. ಆದರೆ, ಹಣ ಉಳಿತಾಯ ಮಾಡಿಕೊಂಡು ಪ್ರಯಾಣಿಸಬೇಕು ಎಂಬ ಯೋಚನೆ ಇರುವವರಿಗೆ 3ಇ ಉತ್ತಮ ಆಯ್ಕೆಯಾಗಿದೆ. ಸ್ವಲ್ಪ ಹೆಚ್ಚುವರಿ ಹಣ ಖರ್ಚಾದರೂ ಸರಿಯೇ ಆರಾಮದಾಯಕ ಪ್ರಯಾಣ ಇಷ್ಟಪಡುವವರು 2ಎಸಿ ಅನ್ನು ಆಯ್ಕೆ ಮಾಡಿಕೊಳ್ಳಬಹುದು.