Select Location
All Locations
State
Region
City / District
Buzz: ಬರಲಿದೆ ʼಜವಾನ್‌ -2ʼ: ಮತ್ತೆ ಅಟ್ಲಿ ಜತೆ ಕೈಜೋಡಿಸಲಿದ್ದಾರೆ ಕಿಂಗ್‌ ಖಾನ್ ‌

Buzz: ಬರಲಿದೆ ʼಜವಾನ್‌ -2ʼ: ಮತ್ತೆ ಅಟ್ಲಿ ಜತೆ ಕೈಜೋಡಿಸಲಿದ್ದಾರೆ ಕಿಂಗ್‌ ಖಾನ್ ‌

ಮುಂಬಯಿ: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ (Shah Rukh Khan) ಮೂರು ಬ್ಯಾಕ್‌ ಟು ಬ್ಯಾಕ್‌ ಹಿಟ್‌ಗಳನ್ನು ಕೊಟ್ಟು, ಈಗ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ʼಪಠಾಣ್‌ʼ, ʼಜವಾನ್‌ʼ ಹಾಗೂ ʼಡಂಕಿʼ ಚಿತ್ರಗಳ ಮೂಲಕ ಕಿಂಗ್‌ ಖಾನ್‌ ಬಿಗ್‌ ಕಂಬ್ಯಾಕ್‌ ಮಾಡಿದ್ದಾರೆ. 2023ರಲ್ಲಿ ಶಾರುಖ್‌ ಖಾನ್‌ ಸೌತ್‌ ಹಿಟ್‌ ನಿರ್ದೇಶಕ ಅಟ್ಲಿ ಕುಮಾರ್ (Atlee Kumar) ಅವರ ಜತೆ ಶಾರುಖ್‌ ʼಜವಾನ್‌ʼ ಚಿತ್ರವನ್ನು ಮಾಡಿದ್ದರು. ವರ್ಲ್ಡ್‌ ಬಾಕ್ಸಾಫೀಸ್‌ನಲ್ಲಿ ಈ ಚಿತ್ರ 1000 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತು. ʼಜವಾನ್‌ʼ ಬಳಿಕ ಶಾರುಖ್‌ - ಅಟ್ಲಿ ಮತ್ತೆ ಒಂದಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಈ ಹಿಂದೆ ಹರಿದಾಡಿತ್ತು. ಈಗ ಮತ್ತೊಮ್ಮೆ ಇದೇ ವಿಚಾರ ಬಿಟೌನ್‌ ವಲಯದಲ್ಲಿ ಗುಲ್ಲಾಗಿದೆ.

ʼಇಂಡಿಯಾ ಟುಡೇʼ ವರದಿಯ ಪ್ರಕಾರ, ಶಾರುಖ್ ಖಾನ್ ಅವರ ಮುಂಬರುವ ಚಿತ್ರ 'ಕಿಂಗ್' ಚಿತ್ರೀಕರಣ ಮುಗಿದ ಬೆನ್ನಲ್ಲೇ 'ಜವಾನ್ 2' ಕಾರ್ಯಗಳು ಪ್ರಾರಂಭವಾಗಲಿವೆ. ಈ ಕುರಿತು ಮಾಹಿತಿ ನೀಡಿರುವ ಮೂಲಗಳು, "ಜವಾನ್ 2 ಚಿತ್ರಕ್ಕೆ ಸಂಬಂಧಿಸಿದ ಕಥೆ ಮತ್ತು ಸ್ಕ್ರಿಪ್ಟ್ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಕಿಂಗ್ ಸಿನಿಮಾ ಮುಗಿದ ತಕ್ಷಣ ಶಾರುಖ್ ಈ ಚಿತ್ರದ ಮೇಲೆ ಗಮನ ಹರಿಸಲಿದ್ದಾರೆ" ಎಂದು ತಿಳಿಸಿವೆ. ಖಳನಾಯಕನ ಪಾತ್ರಕ್ಕೆ ದಕ್ಷಿಣದ ಸ್ಟಾರ್ ನಟ? 'ಜವಾನ್' ಚಿತ್ರದ ಮೊದಲ ಭಾಗದಲ್ಲಿ ವಿಜಯ್ ಸೇತುಪತಿ ಅವರ ಅಭಿನಯ ಎಲ್ಲರ ಗಮನ ಸೆಳೆದಿತ್ತು. 

ಈಗ ಎರಡನೇ ಭಾಗದಲ್ಲಿಯೂ ಅಷ್ಟೇ ಪ್ರಭಾವಶಾಲಿ ಖಳನಾಯಕನನ್ನು ಕರೆತರಲು ಚಿತ್ರತಂಡ ಯೋಜಿಸುತ್ತಿದೆ. ಇದಕ್ಕಾಗಿ ದಕ್ಷಿಣ ಭಾರತದ ಪ್ರಖ್ಯಾತ 'A-ಲಿಸ್ಟ್' (ಸ್ಟಾರ್‌ ನಟರು) ನಟರೊಬ್ಬರನ್ನು ಸಂಪರ್ಕಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಶಾರುಖ್‌ ಸಿದ್ಧಾರ್ಥ್‌ ಆನಂದ್‌ ಅವರ ʼಕಿಂಗ್‌ʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್ ಮತ್ತು ಜೈದೀಪ್ ಅಹ್ಲಾವತ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.


Udayavani 1 hour ago
Home Flash News