ದಮನಕಾರಿ ರಾಜಕಾರಣ ವಿರುದ್ಧ ನ್ಯಾಯವೇ ಗೆಲ್ಲಲಿದೆ: ಪವನ್ ಖೇರಾಗೆ ಕಾಂಗ್ರೆಸ್ ಬೆಂಬಲ
ನವದೆಹಲಿ: ಬೆದರಿಕೆ ಮತ್ತು ದಮನಕಾರಿ ರಾಜಕಾರಣದ ವಿರುದ್ಧ ಅಂತಿಮವಾಗಿ ನ್ಯಾಯವೇ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷವು, ತನ್ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವುದಾಗಿ ಹೇಳಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿಯ ಬಳಿ ಹಲವು ಪಾಸ್‌ಪೋರ್ಟ್‌ಗಳಿದ್ದು, ವಿದೇಶದಲ್ಲಿ ಆಸ್ತಿ ಕೂಡ ಹೊಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಪವನ್ ಖೇರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿತ್ತು. ಇದೇ ವಿಚಾರವಾಗಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಕಾಂಗ್ರೆಸ್ ಪಕ್ಷವು ಪವನ್ ಖೇರಾ ಅವರೊಂದಿಗೆ ದೃಢವಾಗಿ ನಿಂತಿದೆ.
ಗುವಾಹಟಿ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಪ್ರಕ್ರಿಯೆ ನಡೆಯುತ್ತಿದೆ. ಬೆದರಿಕೆ, ದಮನ ಮತ್ತು ಕಿರುಕುಳದ ರಾಜಕಾರಣದ ವಿರುದ್ಧ ನ್ಯಾಯವೇ ಗೆಲ್ಲಲಿದೆ ಎಂಬ ಭರವಸೆ ನಮಗಿದೆ’ ಎಂದು ತಿಳಿಸಿದ್ದಾರೆ. ಏನಿದು ಪ್ರಕರಣ? ‘ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಮೂರು ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ಅಮೆರಿಕದಲ್ಲಿ ಕಂಪನಿಯೊಂದನ್ನು ಹೊಂದಿದ್ದು, ₹50,000 ಕೋಟಿ ಹೂಡಿಕೆ ಮಾಡಲಾಗಿದೆ’ ಎಂದು ಪವನ್ ಖೇರಾ ಆರೋಪಿಸಿದ್ದರು. ರಿನಿಕಿ ಅವರು ಖೇರಾ ವಿರುದ್ಧ ಗುವಾಹಟಿಯ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.