ಗ್ರೇಟ್ ನಿಕೋಬಾರ್ ಯೋಜನೆ ಹೆಸರಲ್ಲಿ ಅತಿ ದೊಡ್ಡ ಹಗರಣ: ರಾಹುಲ್ ಆರೋಪ
ಶ್ರೀ ವಿಜಯಪುರಂ: 'ಗ್ರೇಟ್ ನಿಕೋಬಾರ್ ಯೋಜನೆಯ ಹೆಸರಲ್ಲಿ ಅತಿ ದೊಡ್ಡ ಹಗರಣ ನಡೆಯುತ್ತಿದ್ದು, ಅತ್ಯಂತ ಗಂಭೀರ ಅಪರಾಧಗಳಲ್ಲಿ ಒಂದಾಗಿದೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, 'ದೇಶದ ನೈಸರ್ಗಿಕ ಹಾಗೂ ಬುಡಕಟ್ಟು ಪರಂಪರೆ ವಿರುದ್ಧದ ಹಗರಣವನ್ನು ನಿಲ್ಲಿಸಲೇಬೇಕು' ಎಂದು ಪ್ರತಿಪಾದಿಸಿದ್ದಾರೆ. 'ನಾನು ಇಂದು (ಮಂಗಳವಾರ) ಗ್ರೇಟ್ ನಿಕೋಬಾರ್ ಮೂಲಕ ಪ್ರಯಾಣಿಸಿದ್ದೇನೆ. ನನ್ನ ಜೀವನದಲ್ಲೇ ಅಸಾಮಾನ್ಯ ಕಾಡುಗಳನ್ನು ವೀಕ್ಷಿಸಿದ್ದೇನೆ.
ಇದು ಬೆಳೆಯಲು ತಲೆಮಾರುಗಳೇ ಬೇಕಾದವು. ಆದರೆ ಈ ದ್ವೀಪದ ಮೂಲ ನಿವಾಸಿಗಳು ಹಾಗೂ ವಲಸಿಗರ ಹಕ್ಕುಗಳನ್ನು ದೋಚಲಾಗಿದೆ' ಎಂದು ಆರೋಪಿಸಿದ್ದಾರೆ. 'ಸರ್ಕಾರ ಇಲ್ಲಿ ಮಾಡುವುದನ್ನು 'ಯೋಜನೆ' ಎಂದು ಕರೆಯುತ್ತದೆ. ಆದರೆ ನಾನಿಲ್ಲಿ ನೋಡಿದ್ದು ಯೋಜನೆ ಅಲ್ಲ. ಲಕ್ಷಾಂತರ ಮರಗಳಿಗೆ ಕೊಡಲಿ ಏಟು ಬಿದ್ದಿದೆ. 160 ಚದರ ಕಿ.ಮೀ. ಮಳೆಕಾಡುಗಳನ್ನು ನಾಶಪಡಿಸಲಾಗಿದೆ. ಇಲ್ಲಿನ ನಿವಾಸಿಗಳ ಮನೆಗಳನ್ನು ಕಸಿದುಕೊಳ್ಳಲಾಗಿದೆ. ಇದು ಅಭಿವೃದ್ಧಿಯಲ್ಲ. ಅಭಿವೃದ್ಧಿಯ ಹೆಸರಲ್ಲಿ ವಿನಾಶ ಮಾಡಲಾಗಿದೆ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
'ಗ್ರೇಟ್ ನಿಕೋಬಾರ್‌ನಲ್ಲಿ ಈ ದೇಶದ ನೈಸರ್ಗಿಕ ಮತ್ತು ಬುಡಕಟ್ಟು ಪರಂಪರೆಯ ವಿರುದ್ಧ ಅತಿದೊಡ್ಡ ಹಗರಣ ಹಾಗೂ ಗಂಭೀರ ಅಪರಾಧ ನಡೆಯುತ್ತಿದೆ. ನಾನು ನೋಡಿದ್ದನ್ನು ಭಾರತೀಯರು ನೋಡಲು ಬಯಸುವುದಾದರೆ ಇದನ್ನು ತಕ್ಷಣವೇ ನಿಲ್ಲಿಸಬೇಕು' ಎಂದು ಆಗ್ರಹಿಸಿದ್ದಾರೆ. ಕೇಂದ್ರದ ಪ್ರಕಾರ, ಅಂಡಮಾನ್ ನಿಕೋಬಾರ್ ದ್ವೀಪದ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ₹81 ಸಾವಿರ ಕೋಟಿ ಮೌಲ್ಯದ ಈ ಯೋಜನೆಯು, ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್, ವಿದ್ಯುತ್ ಸ್ಥಾವರ ಮತ್ತು ಟೌನ್‌ಶಿಪ್ ಅನ್ನು ಒಳಗೊಂಡಿದೆ. ಇದು ಸಾಗರ ವ್ಯಾಪಾರ, ಸಂಪರ್ಕ, ಭದ್ರತೆ, ಭೌಗೋಳಿಕ ಹಾಗೂ ಆರ್ಥಿಕ ಹಿತಾಸಕ್ತಿಯನ್ನು ಉತ್ತೇಜಿಸುತ್ತದೆ ಎಂದು ಹೇಳುತ್ತದೆ.