ಬೆಸ್ಕಾಂ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್: ಇಂದಿನಿಂದಲೇ ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ!
ಬೆಂಗಳೂರು (ಮೇ.1): ಮೇ ತಿಂಗಳ ಆರಂಭದಲ್ಲೇ ಬೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಗೃಹಬಳಕೆಯ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಲಾಗಿದ್ದು, ಇಂದಿನಿಂದ (ಮೇ 1) ಜನರೇಟ್ ಆಗುವ ಬಿಲ್‌ಗಳಲ್ಲಿ ಹೊಸ ದರ ಅನ್ವಯವಾಗಲಿದೆ. ಇಂದಿನಿಂದ ಮೇ 15ರವರೆಗೆ ಬಿಲ್ಲಿಂಗ್ ಪ್ರಕ್ರಿಯೆ ನಡೆಯಲಿದ್ದು, ಈ ಅವಧಿಯಲ್ಲಿ ಗ್ರಾಹಕರು ಪಡೆಯುವ ವಿದ್ಯುತ್ ಬಿಲ್‌ಗಳಲ್ಲಿ ಪರಿಷ್ಕೃತ ದರ ನಮೂದಾಗಿರಲಿದೆ. ಕಳೆದ ವರ್ಷದ ಆರ್ಥಿಕ ಕೊರತೆಯನ್ನು ಸರಿದೂಗಿಸಲು ಬೆಸ್ಕಾಂ ಸಲ್ಲಿಸಿದ್ದ ಪ್ರಸ್ತಾವನೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಈ ಹಿಂದೆ ಅನುಮೋದನೆ ನೀಡಿತ್ತು. ಅದರಂತೆ ಈಗ ದರ ಏರಿಕೆ ಜಾರಿಗೆ ಬಂದಿದೆ.
ಬೆಸ್ಕಾಂ ಅನುಭವಿಸುತ್ತಿರುವ ಆರ್ಥಿಕ ನಷ್ಟವೇ ಈ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. 2024-25ರ ಆರ್ಥಿಕ ವರ್ಷದಲ್ಲಿ ಕೆಇಆರ್‌ಸಿ ವಿದ್ಯುತ್ ಮಾರಾಟದಿಂದ 34,084 ಕೋಟಿ ರೂ. ಆದಾಯದ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ವಾಸ್ತವವಾಗಿ ಸಂಗ್ರಹವಾದ ಆದಾಯ ಕೇವಲ 32,019 ಕೋಟಿ ರೂ. ಮಾತ್ರ. ಇದರಿಂದಾಗಿ ಬೆಸ್ಕಾಂಗೆ ಬರೊಬ್ಬರಿ 2,068 ಕೋಟಿ ರೂ. ಗಳಷ್ಟು ಆದಾಯದ ಕೊರತೆ ಉಂಟಾಗಿತ್ತು. ಈ ನಷ್ಟವನ್ನು ತುಂಬಿಕೊಳ್ಳಲು ಈಗ ಗ್ರಾಹಕರ ಮೇಲೆ ಹೊರೆ ಹಾಕಲಾಗುತ್ತಿದೆ. ಗ್ರಾಹಕರ ಮೇಲೆ ಬೀರುವ ಪರಿಣಾಮ ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳವಾಗಿರುವುದರಿಂದ, ತಿಂಗಳಿಗೆ ಸರಾಸರಿ 100 ರಿಂದ 200 ಯೂನಿಟ್ ಬಳಸುವ ಸಾಮಾನ್ಯ ಕುಟುಂಬಗಳ ಬಿಲ್‌ನಲ್ಲಿ ಗಮನಾರ್ಹ ಏರಿಕೆಯಾಗಲಿದೆ. ಗೃಹಜ್ಯೋತಿ ಯೋಜನೆಯ ವ್ಯಾಪ್ತಿಗೆ ಬಾರದ ಅಥವಾ ಮಿತಿ ಮೀರಿದ ವಿದ್ಯುತ್ ಬಳಸುವ ಗ್ರಾಹಕರಿಗೆ ಈ ದರ ಏರಿಕೆ ನೇರ ಪೆಟ್ಟು ನೀಡಲಿದೆ.