China: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; ಕನಿಷ್ಠ 26 ಸಾವು, 61 ಮಂದಿಗೆ ಗಾಯ
ಬೀಜಿಂಗ್: ಚೀನಾದ ಹುನಾನ್ ಪ್ರಾಂತ್ಯದ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದು, 61 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ಖಚಿತಪಡಿಸಿದ್ದಾರೆ. ಹುನಾನ್ ಪ್ರಾಂತ್ಯದ ರಾಜಧಾನಿ ಚಾಂಗ್ಶಾದ ಲಿವುಯಾಂಗ್ ನಗರದಲ್ಲಿರುವ 'ಹುವಾಶೆಂಗ್ ಪಟಾಕಿ ತಯಾರಿಕಾ ಕಂಪನಿ'ಯಲ್ಲಿ ಈ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಕಾರ್ಖಾನೆಯ ಸುತ್ತಮುತ್ತಲಿನ ಹಲವು ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದ ಕಟ್ಟಡಗಳು ಧರಾಶಾಹಿಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಘಟನಾ ಸ್ಥಳದ ಭೀಕರ ದೃಶ್ಯಗಳು ಕಂಡುಬಂದಿವೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ 5 ತಂಡಗಳಲ್ಲಿ 480ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸ್ಫೋಟದ ಸ್ಥಳದಲ್ಲಿ ಹೆಚ್ಚಿನ ಶಾಖ ಮತ್ತು ಅಪಾಯ ಇರುವುದರಿಂದ ಮೂರು ಅತ್ಯಾಧುನಿಕ ರಕ್ಷಣಾ ರೋಬೋಟ್‌ಗಳನ್ನು ಬಳಸಲಾಗುತ್ತಿದೆ. ಸ್ಫೋಟ ಸಂಭವಿಸಿದ ಸ್ಥಳದ ಹತ್ತಿರದಲ್ಲೇ ಕಪ್ಪು ಪುಡಿ (ಬ್ಲ್ಯಾಕ್ ಪೌಡರ್) ಸಂಗ್ರಹಿಸಿಟ್ಟಿದ್ದ ಎರಡು ಉಗ್ರಾಣಗಳಿದ್ದವು. ಮತ್ತಷ್ಟು ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿ ಹತ್ತಿರದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಾಂಗ್ಶಾ ನಗರದ ಮೇಯರ್ ಚೆನ್ ಬೋಜಾಂಗ್ ಅವರು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು. "ನಾವು ಈ ಘಟನೆಯಿಂದ ತೀವ್ರ ದುಃಖಿತರಾಗಿದ್ದೇವೆ ಮತ್ತು ಪಶ್ಚಾತ್ತಾಪ ಅನುಭವಿಸುತ್ತಿದ್ದೇವೆ," ಎಂದು ಅವರು ಹೇಳಿದರು.