Select Location
All Locations
State
Region
City / District
ಅದಾನಿ ವಿರುದ್ಧದ ಆರೋಪ ಕೈಬಿಡಲು ಅಮೆರಿಕದೊಂದಿಗೆ ಮೋದಿ ಚೌಕಾಸಿ: ರಾಹುಲ್ ಗಾಂಧಿ

ಅದಾನಿ ವಿರುದ್ಧದ ಆರೋಪ ಕೈಬಿಡಲು ಅಮೆರಿಕದೊಂದಿಗೆ ಮೋದಿ ಚೌಕಾಸಿ: ರಾಹುಲ್ ಗಾಂಧಿ

ನವದೆಹಲಿ: ಉದ್ಯಮಿ ಗೌತಮ್ ಅದಾನಿ ವಿರುದ್ಧದ ಆರೋಪ ಕೈಬಿಡಲು ರಾಜಿ ಮಾಡಿಕೊಂಡಿರುವ ಪ್ರಧಾನಿ ಮೋದಿ, ಅದೇ ಉದ್ದೇಶದಿಂದ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಗೌತಮ್ ಅದಾನಿ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಕೈಬಿಡಲು ಅಮೆರಿಕದ ನ್ಯಾಯಾಂಗ ಇಲಾಖೆಯು ಮುಂದಾಗಿರುವ ಬೆನ್ನಲ್ಲೇ ಈ ಹೇಳಿಕೆ ಬಂದಿದೆ. ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ‘ಅಮೆರಿಕದೊಂದಿಗೆ ಮೋದಿ ವ್ಯಾಪಾರ ಒಪ್ಪಂದ ಮಾಡಿಲ್ಲ, ಬದಲಾಗಿ ಅದಾನಿ ಬಿಡುಗಡೆಗಾಗಿ ಚೌಕಾಸಿ ಮಾಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಅವರು ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, ‘ಅಮೆರಿಕಕ್ಕೆ ಲಾಭವಾಗುವ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ಮೋದಿ ಯಾಕೆ ಒಪ್ಪಿಕೊಂಡರು ಎಂದು ಈಗ ಎಲ್ಲರಿಗೂ ತಿಳಿದಿದೆ. ಪ್ರಧಾನಿ ಮೋದಿ ಇನ್ನೆಷ್ಟು ರಾಜಿ ಮಾಡಿಕೊಳ್ಳುತ್ತಾರೆ ? ’ ಎಂದು ಪ್ರಶ್ನಿಸಿದ್ದಾರೆ.

ಭಾರತದ ಸರ್ಕಾರಿ ಸ್ವಾಮ್ಯದ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಸೌರ ವಿದ್ಯುತ್‌ ಪೂರೈಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಅಮೆರಿಕದ ಬ್ಯಾಂಕ್‌ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಅದಾನಿ ಸಮೂಹದ ಅದಾನಿ ಗ್ರೀನ್‌ ಎನರ್ಜಿ ಲಿ. 2021–2024ರ ಮಧ್ಯೆ 300 ಕೋಟಿ ಡಾಲರ್‌ಗೂ (₹25 ಸಾವಿರ ಕೋಟಿಗೂ) ಹೆಚ್ಚು ಬಂಡವಾಳ ಸಂಗ್ರಹಿಸಿದ್ದು, ಇದರಲ್ಲಿ 25 ಕೋಟಿ ಡಾಲರ್‌ (₹2,100 ಕೋಟಿ) ಮೊತ್ತವನ್ನು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಅಥವಾ ನೀಡುವ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.


Prajavani 30 minutes ago
Home Flash News