ಇಂಧನ ದರ ಏರಿಕೆ: ತನ್ನದೇ ಪಕ್ಷದ ಚಿಹ್ನೆ ತೋರಿಸಿ ಕೇಂದ್ರವನ್ನು ವ್ಯಂಗ್ಯವಾಡಿದ ಅಖಿಲೇಶ್ ಯಾದವ್
ಲಕ್ನೋ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಲೀಟರ್‌ಗೆ 3 ರೂಪಾಯಿ ಹೆಚ್ಚಳವಾದ ಬೆನ್ನಲ್ಲೇ, ಸಮಾಜವಾದಿ ಪಕ್ಷದ (SP) ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಪ್ರಧಾನಿಯವರ ಇಂಧನ ಉಳಿತಾಯ ಕರೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಅವರು, ತಮ್ಮ ಪಕ್ಷದ ಅಧಿಕೃತ ಚಿಹ್ನೆಯಾದ 'ಸೈಕಲ್' ಮಾತ್ರವೇ ದೇಶದ ಪ್ರಗತಿಗೆ ಮತ್ತು ಇಂದಿನ ಪರಿಸ್ಥಿತಿಗೆ ಏಕೈಕ ಪರ್ಯಾಯ ಎಂದು ಲೇವಡಿ ಮಾಡಿದ್ದಾರೆ. ಅಖಿಲೇಶ್ ಯಾದವ್ ಅವರು ತಾವು ಸೈಕಲ್ ತುಳಿಯುತ್ತಿರುವ ಚಿತ್ರವನ್ನು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡು, "ಮುಂದೆ ಸಾಗಬೇಕಾದರೆ ಸೈಕಲ್ ಒಂದೇ ದಾರಿ" ಎಂದು ಹಿಂದಿಯಲ್ಲಿ ಶೀರ್ಷಿಕೆ ನೀಡಿದ್ದಾರೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಉಳಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ತೈಲ ಬೆಲೆ ಹೆಚ್ಚಿಸಿರುವುದನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಯೋಗಿ ಸರ್ಕಾರದ ಸಚಿವರು, ಅಧಿಕಾರಿಗಳಿಂದ ಪರಿಸರ ಸ್ನೇಹಿ ಪಯಣ ಪ್ರಧಾನಿ ಮೋದಿಯವರ ಕರೆಗೆ ಓಗೊಟ್ಟು ಉತ್ತರ ಪ್ರದೇಶ ಸರ್ಕಾರವು ಇಂಧನ ಉಳಿತಾಯಕ್ಕಾಗಿ ಹಲವು ಪರಿಸರ ಸ್ನೇಹಿ ಕ್ರಮಗಳನ್ನು ಜಾರಿಗೆ ತಂದಿದೆ. ಸಚಿವರು ಮತ್ತು ಉನ್ನತ ಅಧಿಕಾರಿಗಳು ಸಾರ್ವಜನಿಕ ಸಾರಿಗೆ ಮತ್ತು ಇ-ವಾಹನಗಳ ಬಳಕೆಗೆ ಮುಂದಾಗಿದ್ದಾರೆ. ಸಚಿವರ ಸೈಕಲ್ ಸವಾರಿ: ಯುಪಿ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಅವರು ತಮ್ಮ ಅಧಿಕೃತ ನಿವಾಸದಿಂದ ಕಚೇರಿಗೆ ಸೈಕಲ್ ತುಳಿಯುತ್ತಾ ಆಗಮಿಸಿದರೆ, ರಾಜ್ಯ ಸಚಿವ ದಿನೇಶ್ ಪ್ರತಾಪ್ ಸಿಂಗ್ ಸಾರ್ವಜನಿಕ ಸಾರಿಗೆಯನ್ನು ಬಳಸಿದ್ದಾರೆ.
ಸಿಎಂ ಯೋಗಿ ದಂಡು ಅರ್ಧಕ್ಕೆ ಕಡಿತ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಅಧಿಕೃತ ಬೆಂಗಾವಲು ವಾಹನಗಳ (Convoy) ಸಂಖ್ಯೆಯನ್ನು ಶೇ. 50 ರಷ್ಟು ಕಡಿತಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ವಾರದಲ್ಲಿ ಎರಡು ದಿನ 'ವರ್ಕ್ ಫ್ರಮ್ ಹೋಮ್' (ಮನೆಯಿಂದಲೇ ಕೆಲಸ) ನೀತಿಯನ್ನು ಘೋಷಿಸಿದ್ದು, ವರ್ಚುವಲ್ ಸಭೆಗಳಿಗೆ ಆದ್ಯತೆ ನೀಡಿದ್ದಾರೆ. ಅಧಿಕಾರಿಗಳ ನಡಿಗೆ: ವಾರಾಣಸಿ ಮೇಯರ್ ಅಶೋಕ್ ಕುಮಾರ್ ತಿವಾರಿ ಹಾಗೂ ಬಾರಾಬಂಕಿ ಜಿಲ್ಲಾಧಿಕಾರಿ ಈಶಾನ್ ಪ್ರತಾಪ್ ಸಿಂಗ್ ಅವರು ಕಚೇರಿಗೆ ನಡೆದುಕೊಂಡೇ ತೆರಳಿದ್ದಾರೆ. ವಾರಾಣಸಿ ಮಹಾನಗರ ಪಾಲಿಕೆಯು ಪ್ರತಿ ಶನಿವಾರ 'ನೋ ಫ್ಯುಯೆಲ್ ಡೇ' (ಇಂಧನ ರಹಿತ ದಿನ) ಆಚರಿಸಲು ನಿರ್ಧರಿಸಿದೆ. ಲಕ್ನೋದ ಪಿಜಿಐ ಆಸ್ಪತ್ರೆ ನಿರ್ದೇಶಕರು ಸೈಕಲ್ ಬಳಸಿ ಮಾದರಿಯಾಗಿದ್ದಾರೆ.