ವೈಭವ್ ಸೂರ್ಯವಂಶಿ ಆರ್ಭಟ; ಹೈದರಾಬಾದ್ ವಿರುದ್ಧ ಗೆದ್ದು ಕ್ವಾಲಿಫೈಯರ್ 2ಕ್ಕೆ ಲಗ್ಗೆ ಇಟ್ಟ ರಾಜಸ್ಥಾನ್ !
ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 47 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಎದುರು ಹೈದರಾಬಾದ್ ತಂಡ ಮಣಿದಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ್ ಈಗ ಕ್ವಾಲಿಫೈಯರ್ 2ಕ್ಕೆ ಪ್ರವೇಶಿಸಿದ್ದು, ಮೇ 29 ರಂದು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಇತ್ತ ಸೋಲೊಪ್ಪಿಕೊಂಡ ಸನ್ ರೈಸರ್ಸ್ ಹೈದರಾಬಾದ್ ಟೂರ್ನಿಯಿಂದ ಹೊರಬಿದ್ದಿದೆ.
ಮುಳ್ಳನ್ಪುರದ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಅಕ್ಷರಶಃ ರನ್ ಮಳೆ ಹರಿಸಿತು. ನಿಗದಿತ 20 ಓವರ್‌ಗಳಲ್ಲಿ ರಾಜಸ್ಥಾನ್ 243 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಇದು ಐಪಿಎಲ್ ಪ್ಲೇ-ಆಫ್ ಇತಿಹಾಸದ ಎರಡನೇ ಅತಿ ದೊಡ್ಡ ಸ್ಕೋರ್ ಆಗಿದೆ. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ ಕೇವಲ 196 ರನ್ ಗಳಿಸಲಷ್ಟೇ ಶಕ್ತವಾಯಿತು. ಹೈದರಾಬಾದ್ ತಂಡದ ಪ್ರಮುಖ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ಹೆನ್ರಿಚ್ ಕ್ಲಾಸೆನ್ ಈ ನಿರ್ಣಾಯಕ ಪಂದ್ಯದಲ್ಲಿ ವಿಫಲರಾದದ್ದು ತಂಡಕ್ಕೆ ಭಾರಿ ಹೊಡೆತ ನೀಡಿತು.
ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನ ರೂವಾರಿ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಮೂಲಕ ಮೈದಾನದಲ್ಲಿ ಬಿರುಗಾಳಿ ಎಬ್ಬಿಸಿದರು. ಕೇವಲ 8 ಓವರ್‌ಗಳಲ್ಲೇ ರಾಜಸ್ಥಾನ್ ತಂಡ 125 ರನ್ ಗಳಿಸಲು ವೈಭವ್ ಅವರ ಸ್ಫೋಟಕ ಆಟವೇ ಕಾರಣವಾಯಿತು. 29 ಎಸೆತಗಳಲ್ಲಿ 97 ರನ್ ಸಿಡಿಸಿದ ಅವರು, ಕ್ರಿಸ್ ಗೇಲ್ ಅವರ ಅತ್ಯಂತ ವೇಗದ ಶತಕದ (30 ಎಸೆತ) ದಾಖಲೆಯನ್ನು ಮುರಿಯುವ ಸನಿಹದಲ್ಲಿದ್ದರು. ಆದರೆ 29ನೇ ಎಸೆತದಲ್ಲಿ ಔಟ್ ಆಗುವ ಮೂಲಕ ಆ ಅವಕಾಶ ತಪ್ಪಿಸಿಕೊಂಡರು.